ನೇಕಾರರಿಗೆ 1.25ರೂ.ದರದಲ್ಲಿ ವಿದ್ಯುತ್ ಪೂರೈಕೆ ಯೋಜನೆ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜು. 24: ನೇಕಾರರ ವಿಶೇಷ ಯೋಜನೆಯಡಿ ಪ್ರಸ್ತುತ ಜಾರಿಯಲ್ಲಿರುವ 20 ಎಚ್.ಪಿ. ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗದ ಘಟಕಗಳಿಗೆ 1.25ರೂ.ದರದಲ್ಲಿ ವಿದ್ಯುತ್ ಪೂರೈಕೆ ಯೋಜನೆಯನ್ನು ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ನೇಕಾರರ ಸಮುದಾಯಗಳ ಒಕ್ಕೂಟದ ನಿಯೋಗದ ಬೇಡಿಕೆಗಳಿಗೆ ಸ್ಪಂದಿಸಿ, ಈ ವಿಷಯ ತಿಳಿಸಿದರು. ಇದಲ್ಲದೆ 10 ಎಚ್.ಪಿ. ವರೆಗಿನ ಘಟಕಗಳಿಗೆ 250 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲು ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಇದಲ್ಲದೆ ಹಿಂದುಳಿದ ವರ್ಗಗಳ 2 ‘ಎ’ ಅಡಿ ಬರುವ ಸಮುದಾಯಗಳ ಗುತ್ತಿಗೆದಾರರಿಗೆ 1ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಘೋಷಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
‘ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನೂ ನೀಡಬೇಕು. ಒಕ್ಕೂಟಕ್ಕೆ ಬೆಂಗಳೂರು ನಗರದಲ್ಲಿ ನಿವೇಶನ ನೀಡಬೇಕು. ಕಾಂತರಾಜ ನೇತೃತ್ವದ ಆಯೋಗದ ವರದಿ ಜಾರಿ ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಯೋಗವು ಸಿಎಂಗೆ ಮನವಿ ಮಾಡಿತು.
ಈ ವೇಳೆ ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಂಪಿ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮಿ, ತಪಸಿಹಳ್ಳಿ ದಿವ್ಯಜ್ಞಾನಾನಂದ ಸ್ವಾಮಿ, ಬಾಗಲಕೋಟೆ ಜಿಲ್ಲೆ ನೀರಲಕೇರಿ ಸಿದ್ಧಾರೂಢ ಮಠದ ಶ್ರೀ ಘನಲಿಂಗ ಸ್ವಾಮಿ, ಧಾರವಾಡದ ಶಿವಾನಂದ ಮಠದ ಶಿವಾನಂದ ಸ್ವಾಮಿ, ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.