ಗುತ್ತಿಗೆದಾರರ ಸಂಘ ಸರಕಾರದ ʼಕಮಿಷನ್ ಕಲೆಕ್ಷನ್ ಸೆಂಟರ್ʼ ಆಗಿ ಪರಿವರ್ತನೆಯಾಗಿದೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಅ.14: ರಾಜ್ಯ ಸರಕಾರ ಮತ್ತು ಗುತ್ತಿಗೆದಾರರು ಜೊತೆಯಾಗಿ ಲೂಟಿ ಮಾಡುತ್ತಿದ್ದು, ಕಾಂಟ್ರಾಕ್ಟರ್ ಅಸೋಸಿಯೇಷನ್ ಸರಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿ ಪರಿವರ್ತನೆಯಾಗಿದೆ. ಅಕ್ರಮ ಹಣ ಪತ್ತೆಯಾಗಿರುವ ಕುರಿತು ಈಡಿ ಹಾಗೂ ಸಿಬಿಐ ಎರಡೂ ತನಿಖೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬಂದಾಗಿನಿಂದ ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ. ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರ ಇದು. ಗ್ರಾಮದಿಂದ ಹಿಡಿದು ವಿಧಾನಸೌಧದವರೆಗೂ ಭ್ರಭ್ರಷ್ಟಾಚಾರ ಇದೆ. ಬಹಿರಂಗವಾಗಿಯೇ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾದ ತಕ್ಷಣವೇ ಗುತ್ತಿಗೆದಾರನ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿರುವುದು ಇದೇ ಮೊದಲು. ಸರಕಾರ 10 ಪರ್ಸೆಂಟ್ ಕಮಿಷನ್ ಪಡೆದಿರುವುದು ಸಾಬೀತಾಗಿದೆ. ಇನ್ನಷ್ಟು ಗುತ್ರಿಗೆದಾರರ ಮನೆಮೇಲೆ ದಾಳಿ ಮಾಡಿದರೆ ಇನಷ್ಟು ಕಮಿಷನ್ ಹಣ ಹೊರ ಬರಲಿದೆ ಎಂದು ಅವರು ಹೇಳಿದರು.
ಐದು ರಾಜ್ಯದ ಚುನಾವಣೆಗೆ ಎಟಿಎಂ ರೀತಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ 42 ಕೊಟಿ ರೂ. ಸಿಕ್ಕಿರುವುದಕ್ಕೂ ಸಿಎಂ ಭೇಟಿ ಮಾಡಿದ್ದಾರೆ. ಸೆಲೆಕ್ಟಿವ್ ಆಗಿ ಪೇಮೆಂಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದೇ ಭ್ರಷ್ಟಾಚಾರದ ಪುರಾವೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.