ಒಂದು ತಿಂಗಳೊಳಗೆ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆಗೆ ಗುತ್ತಿಗೆದಾರರ ಸಂಘ ಒತ್ತಾಯ
ತನಿಖೆ, ಆಯೋಗದ ಹೆಸರಿನಲ್ಲಿ ಮುಂದೂಡಿದರೆ ಪ್ರತಿಭಟನೆಯ ಎಚ್ಚರಿಕೆ
ಬೆಂಗಳೂರು, ಅ.13: ಗುತ್ತಿಗೆದಾರರಿಗೆ ಸರಕಾರದ ವಿವಿಧ ಇಲಾಖೆಗಳಿಂದ ಸುಮಾರು 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇದೀಗ ತನಿಖೆಯ ಹೆಸರಿನಲ್ಲಿ ಹಣ ಪಾವತಿಯಾಗದಂತೆ ತಡೆ ಹಿಡಿಯಲಾಗಿದೆ. ಆದ್ದರಿಂದ ಒಂದು ತಿಂಗಳೊಳಗೆ ಎಲ್ಲ ಇಲಾಖೆಗಳಲ್ಲೂ ಕನಿಷ್ಠ ಶೇ.50ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು. ತನಿಖೆ, ಆಯೋಗದ ಹೆಸರಿನಲ್ಲಿ ಬಾಕಿ ಪಾವತಿಯನ್ನು ಮುಂದೂಡಿದರೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯುವುದರ ಬದಲಾಗಿ ಹೊಸದಾಗಿ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ. ಈಗಾಗಲೇ ಹಲವು ವರ್ಷಗಳಿಂದ ಗುತ್ತಿಗೆದಾರರು ಬಾಕಿ ಬಿಲ್ ಬಿಡುಗಡೆ, ಜಿಎಸ್ ಟಿ ಗೊಂದಲ, ಸೇರದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ ಹಂತವಾಗಿಯಾದರೂ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ಸರ್ಕಾರ ತೋರಬೇಕಾಗಿತ್ತು. ಆದರೆ ಸರ್ಕಾರ ಗುತ್ತಿಗೆದಾರರನ್ನು ನಿರ್ಲಕ್ಷಿಸುತ್ತಾ ಬಂದಿದೆ ಎಂದು ಕೆಂಪಣ್ಣ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ
ನೂತನ ಸರಕಾರ ರಚನೆಯಾದ ನಂತರ ಬಾಕಿ ಮೊತ್ತವನ್ನು ಪಾವತಿಸುತ್ತಿಲ್ಲ. ತನಿಖೆಯ ಹೆಸರಿನಲ್ಲಿ ಹಣ ಪಾವತಿಯಾಗದಂತೆ ತಡೆ ಹಿಡಿಯಲಾಗಿದೆ. ಸರ್ಕಾರವೇ ಮಾಡಿರುವ ನಿಯಮಗಳ ಪ್ರಕಾರ ಕಾಮಗಾರಿಗಳಿಗೆ ಒಂದು ವರ್ಷದ ಒಪ್ಪಂದ ಮಾತ್ರ ಇರುತ್ತದೆ. ಆದರೆ ಸರಕಾರ ಮೂರು ವರ್ಷದ ತನಿಖೆ ನಡೆಸುವುದಾಗಿ ಹೇಳುತ್ತಿದೆ. ಇದು ಹೇಗೆ ಸಾಧ್ಯ? ಒಂದು ವರ್ಷದಿಂದೀಚೆಗಿನ ಕಾಮಗಾರಿಗಳ ಬಾಕಿ ಮೊತ್ತವನ್ನು ತಡೆ ಹಿಡಿದು ತನಿಖೆ ಮುಗಿದ ನಂತರವೇ ನೀಡಲು ಅಭ್ಯಂತರವಿಲ್ಲ. ಆದರೆ ಮೂರ್ನಾಾಲ್ಕು ವರ್ಷಗಳ ಬಾಕಿ ಬಿಲ್ ತಡೆ ಹಿಡಿಯುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ಕೆಲವು ಇಲಾಖೆಗಳಲ್ಲಿ ಕೇವಲ ಶೇ.7ರಷ್ಟು ಬಿಲ್ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ. ಅಂದರೆ ಒಂದು ಕೋಟಿ ರೂಪಾಯಿ ಕಾಮಗಾರಿಗೆ ಕೇವಲ ರೂ.7 ಲಕ್ಷ! ಗುತ್ತಿಗೆದಾರರು ಶೇ.18ರಷ್ಟು ಜಿಎಸ್ ಟಿ ತುಂಬಬೇಕಾಗುತ್ತದೆ. ಉಳಿದ ಶೇ.11ರಷ್ಟು ಹಣವನ್ನು ಮತ್ತೆ ಎಲ್ಲಿಂದ ತರುವುದು? ಗುತ್ತಿಗೆದಾರರ ಬಳಿ ಜಿಎಸ್ ಟಿ ಪಾವತಿಸುವಷ್ಟೂ ಹಣ ಇಲ್ಲದೆ ಒದ್ದಾಡುತ್ತಿದ್ದಾರೆ ಎಂದು ಕೆಂಪಣ್ಣ ವಿವರಿಸಿದ್ದಾರೆ.
ಕೆಲವು ಇಲಾಖೆಗಳಲ್ಲಿ ಒಳಗೊಳಗೆ ತಮಗೆ ಬೇಕಾದವರಿಗೆ ಮಾತ್ರ ಬಾಕಿ ಮೊತ್ತ ಪಾವತಿಸುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಈ ಸಂಬಂಧ ಪ್ರಶ್ನಿಸಿದರೆ ಸ್ಥಳಿಯ ಇಂಜಿನಿಯರ್ ಮತ್ತು ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ನಮ್ಮ ಗಮನಕ್ಕೆ ಬಾರದೆ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರದೆ ಶಿಫಾರಸು ತಂದವರಿಗೆ ರಾತ್ರೋರಾತ್ರಿ ಚೆಕ್ ನೀಡಿದ ಉದಾಹರಣೆಗಳಿವೆ ಎಂದು ಅವರು ಆರೋಪಿಸಿದ್ದಾರೆ.
ವಿವಿಧ ಕಾಮಗಾರಿಗಳನ್ನು ವರ್ಗೀಕರಿಸಿ ಅನುದಾನವನ್ನು ಬಿಡುಗಡೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದೆ. ಈ ಸಂಬಂಧ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಬಿಎಂಪಿ ಆಯುಕ್ತರು ಮತ್ತು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಕೆಂಪಣ್ಣ ದೂರಿದ್ದಾರೆ.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಎರಡು ಮೂರು ಬಾರಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇವೆ. ವಿವಿಧ ಇಲಾಖೆಗಳ ಸಚಿವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಆದರೂ ಸರಕಾರ ಉದಾಸೀನ ಮಾಡುತ್ತಿದೆ. ಆದ್ದರಿಂದ
ಸರಕಾರ ಒಂದು ತಿಂಗಳೊಳಗೆ ಎಲ್ಲ ಇಲಾಖೆಗಳಲ್ಲೂ ಕನಿಷ್ಠ ಶೇ.50ರಷ್ಟು ಬಾಕಿ ಮೊತ್ತವನ್ನು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ಸಬೂಬು, ತನಿಖೆ, ಆಯೋಗದ ಹೆಸರಿನಲ್ಲಿ ಮುಂದೂಡಬಾರದು. ಇಲ್ಲವಾದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ.ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.