‘ಸನಾತನ ಧರ್ಮ’ದ ಕುರಿತು ವಿವಾದಿತ ಹೇಳಿಕೆ: ತಮಿಳುನಾಡಿನ ಸಚಿವ ಉದಯನಿಧಿಗೆ ಬೆಂಗಳೂರಿನ ಕೋರ್ಟ್ನಿಂದ ಸಮನ್ಸ್ ಜಾರಿ
ಉದಯನಿಧಿ ಸ್ಟಾಲಿನ್ Photo- PTI
ಬೆಂಗಳೂರು: ಸನಾತನ ಧರ್ಮ ಕುರಿತು ವಿವಾದಿತ ಹೇಳಿಕೆ ಆರೋಪ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
‘ಸನಾತನ ಧರ್ಮ’ದ ಕುರಿತು ಹೇಳಿಕೆ ಸಂಬಂಧ ಉದಯನಿಧಿ ಸ್ಟಾಲಿನ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು. ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಲಯ ಉದಯನಿಧಿ ಸ್ಟಾಲಿನ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.
ಪರಮೇಶ್ ಎಂಬುವವರು ಕೋರ್ಟ್ನಲ್ಲಿ ದಾಖಲಿಸಿದ್ದ ಖಾಸಗಿ ದೂರಿನ್ವಯ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಮಾರ್ಚ್ 4ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಇನ್ನೂ, ಈ ವಿವಾದ ಕುರಿತು ಈಗಾಗಲೇ ಪ್ರತಿಕ್ರಿಯಿಸಿರುವ ಸಚಿವ ಉದಯನಿಧಿ ಸ್ಟಾಲಿನ್, ನಾನು ಮಾತನಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ನಾವು ಪ್ರಕರಣವನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ನಾನು ನನ್ನ ನಿಲುವನ್ನು ಬದಲಾಯಿಸುವುದಿಲ್ಲ. ನಾನು ನನ್ನ ಸಿದ್ಧಾಂತದ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.