ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಕಬಾಬ್ನಲ್ಲಿ ಕೃತಕ ಬಣ್ಣ ಬಳಕೆ ನಿಷೇಧ : ಸಚಿವ ದಿನೇಶ್ ಗುಂಡೂರಾವ್
Photo: ndtv.com/newindian express
ಬೆಂಗಳೂರು: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಪಾನಿಪುರಿ, ಕಬಾಬ್ ಸೇರಿ ಎಲ್ಲ ರೀತಿಯ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಲಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ ನಿಯಮ ಉಲ್ಲಂಘಿಸಿದರೆ ಕನಿಷ್ಟ 7 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ದಂಡ ವಿಧಿಸಿ, ಮೊಕದ್ದಮೆ ದಾಖಲಿಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ ಕೂಡಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ 171 ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಪರಿಶೀಲನೆ ನಡೆಸಿದಾಗ ಅದರಲ್ಲಿ 107 ಕೃತಕ ಬಣ್ಣಗಳು ಕಂಡುಬಂದ ಅಸುರಕ್ಷಿತ ಮಾದರಿಗಳಾಗಿವೆ. ಜತೆಗೆ 64 ಕೃತಕ ಬಣ್ಣಗಳಿಲ್ಲದೆ ಇರುವ ಸುರಕ್ಷಿತ ಮಾದರಿಗಳಾಗಿವೆ ಎಂದು ವಿವರಣೆ ನೀಡಿದರು.
ಇನ್ನೂ, ಕಾಟನ್ ಕ್ಯಾಂಡಿಗಳ 25 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 15 ಕೃತಕ ಬಣ್ಣ (ರೋಡಮೈನ್-ಬಿ) ಮಾದರಿ ಕಂಡುಬಂದಿದ್ದು, ಇದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಅಸುರಕ್ಷಿತವಾಗಿವೆ. ಹೀಗಾಗಿ, ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆಹಾರ ಸುರಕ್ಷತಾ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ ಎಂದು ಅವರು ತಿಳಿಸಿದರು.
ಕೃತಕ ಬಣ್ಣಗಳನ್ನು ಬಳಸಿರುವ ತಿಂಡಿ-ತಿನಿಸುಗಳನ್ನು ದೀರ್ಘಕಾಲ ಬಳಸುವುದರಿಂದ ಚಿಕ್ಕ ಮಕ್ಕಳೂ ಸೇರಿದಂತೆ ಬಳಕೆದಾರರಿಗೆ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುವ ಕಾರಣ ಸಾರ್ವಜನಿಕರು ಕೃತಕ ಬಣ್ಣಗಳನ್ನು ಬಳಸಿ ತಯಾರಿಸಲಾಗಿರುವ ತಿಂಡಿ-ತಿನಿಸುಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು ಎಂದು ಅವರು ಮನವಿ ಮಾಡಿದರು.
ಮೂರು ತಿಂಗಳಿನಿಂದ ವಿವಿಧ ಆಹಾರ ಪದಾರ್ಥಗಳ ವಿಶ್ಲೇಷಣೆಗೆ ರಾಜ್ಯಾದ್ಯಂತ ವಿಶೇಷ ಆಂದೋಲಗಳನ್ನು ಕೈಗೊಳ್ಳಲಾಗಿತ್ತು. ಅದರಂತೆ 652 ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಹಾಗೂ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ಗಳನ್ನು ಪರಿಶೀಲಿಸಿ ಅಲ್ಲಿನ 504 ಆಹಾರ ಮಾದರಿಗಳನ್ನು ಪರಿಶೀಲನೆ ನಡೆಸಲಾಗಿತ್ತು. ಅವುಗಳಲ್ಲಿ 9 ಮಾದರಿಗಳು ಅಸುರಕ್ಷಿತವಾಗಿದ್ದು, 3 ಮಾದರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎನ್ನುವ ಮಾಹಿತಿ ಗೊತ್ತಾಗಿದೆ. 613 ಅಂಗನವಾಡಿಗಳನ್ನು ಪರಿಶೀಲಿಸಿ ಅಲ್ಲಿನ 232 ಆಹಾರ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಿದ್ದು, ಅವುಗಳಲ್ಲಿ 3 ಮಾದರಿಗಳು ಅಸುರಕ್ಷಿತವಾಗಿದ್ದು, 2 ಮಾದರಿಗಳು ಕಳಪೆ ಗುಣಮಟ್ಟದ್ದಾಗಿದೆ ಎಂಬ ಅಂಶ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
ಅದೇ ರೀತಿ, ರಾಜ್ಯ ವ್ಯಾಪಿ 56 ಹಾಲಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಗುಣಮಟ್ಟ ವಿಶ್ಲೇಷಣೆಗೊಳಪಡಿಸಿದ್ದು, ಎಲ್ಲ ಮಾದರಿಗಳೂ ಸಹ ಸುರಕ್ಷಿತ ಎಂದು ವರದಿಯಾಗಿದೆ. 235 ಕುಡಿಯುವ ನೀರಿನ ಬಾಟಲಿಗಳ ತಯಾರಿಕಾ ಘಟಕಗಳನ್ನು ಪರಿಶೀಲಿಸಿ 25 ಕುಡಿಯುವ ನೀರಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಗುಣ ವಿಶ್ಲೇಷಣೆಗೊಳಪಡಿಸಿದಾಗ ಅವುಗಳಲ್ಲಿ 2 ಮಾದರಿಗಳು ಕಳಪೆ ಎಂದು ದೃಢಪಟ್ಟಿದೆ. ಹಾಗಾಗಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ 20 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ 34 ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ 24 ಪ್ರಕರಣಗಳು ಇತ್ಯರ್ಥವಾಗಿದ್ದು, ಈ ಪ್ರಕರಣಗಳಲ್ಲಿ 4.77 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಏನಿದು ರೋಡಮೈನ್-ಬಿ?: ‘ಕಾಟನ್ ಕ್ಯಾಂಡಿಯಲ್ಲಿ ಬಳಸುವ ರೋಡಮೈನ್-ಬಿ ಅತ್ಯಂತ ಅಪಾಯಕಾರಿಯಾಗಿದ್ದು, ದಟ್ಟ ಗುಲಾಬಿ ಅಥವಾ ಇತರ ಬಣ್ಣ ನೀಡುವುದಕ್ಕಾಗಿ ಇದನ್ನು ಬಳಸುತ್ತಾರೆ. ಇದು ಕ್ಯಾನ್ಸರ್ ಗೆ ಕಾರಣವಾಗುವುದರ ಜತೆಗೆ ಮಿದುಳು, ಮೂತ್ರಪಿಂಡ, ಹೃದಯಕ್ಕೂ ಹಾನಿ ಮಾಡಬಲ್ಲದು. ಇದಲ್ಲದೆ ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣಕ್ಕಾಗಿ ಬಳಸುವ ಟಾರ್ ಟ್ರಾಸೈನ್, ಸನ್ಸೆಟ್ ಯೆಲ್ಲೊ ಮತ್ತು ಕಾರ್ಮೊಸಿನ್ ಆರೋಗ್ಯಕ್ಕೆ ಅಪಾಯಕಾರಿ. ಇನ್ನೂ, ರೋಡಮೈನ್ ಪ್ಯಾಕ್ ಮಾಡಿದ ಆಹಾರಗಳಿಗೆ ಸೀಮಿತ ಪ್ರಮಾಣದಲ್ಲಿ ಬಳಕೆ ಮಾಡಲು ಮಾತ್ರ ಅವಕಾಶ ಇದೆ. ಆದರೆ, ಮನೆ, ಹೋಟೆಲ್ ಮತ್ತು ಇತರ ಕಡೆಗಳಲ್ಲಿ ಬಳಸುವುದಕ್ಕೆ ಅನುಮತಿ ಇಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.
ಶಿಕ್ಷೆ ಏನಿದೆ?: ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ದಂಡ ವಿಧಿಸಲು ಹಾಗೂ ಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಬಹುದು ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.