ಗೃಹ ಲಕ್ಷ್ಮಿ ಯೋಜನೆ ಚಾಲನೆಗೆ ಕ್ಷಣಗಣನೆ; ಗಣ್ಯರ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜು
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭಾಗಿ
ಮೈಸೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ದೊರೆಯಲಿದ್ದು, ಗಣ್ಯರ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ 11:30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರ ಕಟೌಟ್‌ಗಳನ್ನು ನಗರದೆಲ್ಲೆಡೆ ಹಾಕಲಾಗಿದೆ. ಮೈಸೂರಿನ ರಾಜ ಬೀದಿಗಳಲ್ಲಿ ಕಾಂಗ್ರೆಸ್ನ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ.
ಮಹಾರಾಜ ಕಾಲೇಜು ಮೈದಾನದ ಮುಖ್ಯ ವೇದಿಕೆಯ ಹಿಂದೆ 104 ಅಡಿ ಅಗಲದ ಪರದೆ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಮೈಸೂರು ಮತ್ತು ಸಮೀಪದ ಕೊಡಗು, ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಂದ ಸುಮಾರು 1 ಲಕ್ಷ ಮಹಿಳೆಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳನ್ನು ಸ್ಥಳಕ್ಕೆ ಕರೆದೊಯ್ಯಲು ಸುಮಾರು 2,000 ಬಸ್‌ಗಳನ್ನು ಬಳಸಲಾಗುತ್ತಿದೆ.
ʼʼತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆʼʼ
ʼʼವೈಯಕ್ತಿಕ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ನಾಡಿನ ಕೋಟ್ಯಂತರ ತಾಯಂದಿರು ಇಂದು ನಮ್ಮ "ಗೃಹಲಕ್ಷ್ಮಿ" ಯೋಜನೆಯಿಂದ ಸ್ವತಂತ್ರ, ಸ್ವಾವಲಂಬಿ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಪ್ರತಿಯೊಬ್ಬ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಿ ನುಡಿದಂತೆ ನಡೆಯಲಿದೆ. ಇದೊಂದು ಐತಿಹಾಸಿಕ ದಿನ. ಕಾರ್ಯಕ್ರಮದ ಚಾಲನೆಗೆ ಇನ್ನೇನು ಕೆಲವೇ ನಿಮಿಷಗಳು ಉಳಿದಿರುವ ಈ ಹೊತ್ತಿನಲ್ಲಿ ನಾಡಿನ ತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆ. ಮಹಿಳೆಯರ ಸಬಲೀಕರಣದಿಂದ ಬಲಿಷ್ಠ ಸಮಾಜ ನಿರ್ಮಾಣ. ಮಹಿಳಾ ಸಮಾನತೆಯಿಂದ ಸಮ ಸಮಾಜ ಸ್ಥಾಪನೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.