Mysuru dasara | ಜಂಬೂಸವಾರಿಗೆ ಕ್ಷಣಗಣನೆ; ಸಿಎಂ ಸಿದ್ದರಾಮಯ್ಯ ಅವರಿಂದ ನಾಳೆ (ಅ. 24) ಚಾಲನೆ
ಭದ್ರತೆಗೆ 4 ಸಾವಿರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ನಿಯೋಜನೆ
ಮೈಸೂರು,ಅ.23: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣ ಗಣನೆ ಆರಂಭವಾಗಿದ್ದು ಪೊಲೀಸರು ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಂಬೂ ಸವಾರಿ ಮೆರವಣಿಗೆ ಅಕ್ಟೋಬರ್ 24 ರ ಮಂಗಳವಾರ ಅರಮನೆ ಆವರಣದಿಂದ ಪ್ರಾರಂಭವಾಗಿ ಸಂಜೆ ವೇಳೆಗೆ ಬನ್ನಿಮಂಟಪ ತಲುಪಲಿದೆ. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ. ಅಂದು ಬೆಳಿಗ್ಗೆ ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ನಡೆಯಲಿದ್ದು, ಮಧ್ಯಾಹ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ನಡೆಯಲಿದೆ.
ಮೆರವಣಿಗೆ ಸಾಗುವ ಅರಮನೆ ಆವರಣದ ಸೇರಿದಂತೆ ಎಲ್ಲಾ ಮಾರ್ಗಗಳಲ್ಲು ಕಟ್ಟು ನಿಟ್ಟಿನ ನಿಗಾವನ್ನು ಪೊಲೀಸರು ವಹಿಸಿದ್ದಾರೆ.
ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕೂರು ಶ್ರೀಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಹೆಜ್ಜೆ ಹಾಕುವ ಅಭಿಮನ್ಯು ಆನೆ ಬಿಗಿ ಭದ್ರತೆ ನಡುವೆ ಸಾಗಲಿದೆ. ಅರಮನೆಯಿಂದ ಹೊರಟು ಕೆ.ಆರ್.ವೃತ್ತ, ಸಯ್ಯಾಜಿ ರಾವ್ ರಸ್ತೆ, ಆರ್ಯುವೇದ ಕಾಲೇಜು ವೃತ್ತ. ಬಂಬೂ ಬಜಾರ್ ರಸ್ತೆ, ಹೈವೆ ಸರ್ಕಲ್, ಮೂಲಕ ಹಾದು ಬನ್ನಿ ಮಂಟಪ ರಸ್ತೆ ತಲುಪಿ ಅಲ್ಲಿಂದ ನೇರವಾಗಿ ಬನ್ನಿ ಮಂಟಪದ ಆವರಣದಲ್ಲಿ ಮುಕ್ತಾಯವಾಗಲಿದೆ.
ಈ ಕುರಿತು ಸಿದ್ಧತೆಗಳ ಬಗ್ಗೆ ರವಿವಾರ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಂಬೂ ಸವಾರಿ ಮೆರವಣಿಗೆ ಹೊರಡುವ ಅರಮನೆ ಆವರಣ ಸೇರಿದಂತೆ ಎಲ್ಲಾ ಮಾರ್ಗಗಳಲ್ಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಮೆರವಣಿಗೆ ಸಾಗುವ ಎಲ್ಲಾ ಮಾರ್ಗಗಳಲ್ಲೂ ಸಿಸಿ ಕ್ಯಾಮೆರ ಕಣ್ಗಾವಲಿರಿಸಲಿದೆ ಎಂದು ಹೇಳಿದರು.
ಅರಮನೆಯಿಂದ ಸಾಗುವ ಮೆರವಣಿಗೆ ಬನ್ನಿಮಂಟಪದಲ್ಲಿ ಮುಕ್ತಾಯಗೊಳ್ಳಲಿದ್ದು, ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಚಿನ್ನದ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಆನೆ ಸುತ್ತಾ ಜನ ಸಂದಣಿ ಆಗದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಅಂದು ಸಂಜೆ ಬನ್ನಿಮಂಟಪದ ಪಂಜಿನ ಕವಾಯಿತು ನಡೆಯಲಿದ್ದು, ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಇಂದು ಏರ್ ಶೋ ನಡೆಯಲಿದ್ದು, ಅದಕ್ಕೂ ಹೆಚ್ಚಿನ ಭಧ್ರತೆ ಒದಗಿಸಲಾಗಿದೆ ಎಂದು ಹೇಳಿದರು.
ಜಂಬೂ ಸವಾರಿ ಮೆರಣಿಗೆಗೂ ಮುನ್ನಾ ರವಿವಾರ ಅರಮನೆಯೊಳಗೆ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆ ಸೇರಿದಂತೆ ಇತರೆ ಗಜಪಡೆಗಳಿಗೆ ಪೂರ್ವ ತಯಾರಿ ನಡೆಸಲಾಯಿತು. ಅರಮನೆಯೊಳಗೆ ಹಾಕಲಾಗಿರುವ ವೇದಿಕೆ ಮುಂಭಾಗ ಆನೆಗಳು ಬಂದು ಗೌರವ ಸಲ್ಲಿಸುವ ಪೂರ್ವ ತಯಾರಿ ನಡೆಸಿ ಅಧಿಕಾರಿಗಳು ಪರಿಶೀಲಿಸಿದರು.