ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದ ಕೋರ್ಟ್
ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಹಗರಣ ಬಗ್ಗೆ ತನಿಖೆ ನಡೆಸಿ ಮುಂದಿನ ಡಿ.24ರೊಳಗೆ ವರದಿ ಸಲ್ಲಿಸುವಂತೆ ಮೈಸೂರು ಲೋಕಾಯುಕ್ತ ಎಸ್ಪಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಮೈಸೂರಿನ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಾಹಂ ಸಲ್ಲಿಸಿದ್ದ ಖಾಸಗಿ ದೂರುಗಳ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತು. ರಾಜ್ಯಪಾಲರ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ಮುಕ್ತಾಯವಾಗುವವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನಿನ್ನೆ(ಸೆ.24) ಹೈಕೋರ್ಟ್ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ, ಇಂದು(ಸೆ.25)ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಆದೇಶ ಪ್ರಕಟಿಸುವ ಮುನ್ನಾ ಜನಪ್ರತಿನಿಧಿಗಳ ನ್ಯಾಯಾಲಯ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಮುಡಾಗೆ ಜಮೀನು ಸ್ವಾಧೀನ, ನಂತರ ಪರಿಹಾರ ನಿಗದಿ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಿದರು. ಕಾನೂನುಬಾಹಿರ ಭೂಪರಿವರ್ತನೆ ಬಗ್ಗೆಯೂ ಆದೇಶದಲ್ಲಿ ಉಲ್ಲೇಖ ಮಾಡಿ ಪರಿಹಾರ ನಿಗದಿಯಾದ ಬಳಿಕವೂ ಡಿನೋಟಿಫಿಕೇಷನ್ ಮಾಡಲಾಗಿದೆ. ಮುಡಾದಿಂದ ನಿವೇಶನ ಹಂಚಿಕೆಯಾದ ಬಳಿಕವೂ ಸಿದ್ದರಾಮಯ್ಯ ಅವರ ಬಾಮೈದನಿಂದ ಜಮೀನು ಖರೀದಿ ಮಾಡಲಾಗಿದೆ. ನಂತರ ಸಿಎಂ ಸಿದ್ದರಾಮಯ್ಯ ಪತ್ನಿಗೆ ಜಮೀನು ದಾನ ಮಾಡಲಾಗಿದೆ. ನಂತರ ಬದಲಿ ನಿವೇಶನಕ್ಕೆ ಕೋರಿಕೆಯ ವಿವರ ನಮೂದಿಸಿರುವುದು ಕಂಡುಬಂದಿದೆ ಎಂದು ತಿಳಿಸಿದೆ.
ಮೇಲ್ನೋಟಕ್ಕೆ ತನಿಖೆ ಅಗತ್ಯವೆಂದು ಹೈಕೋರ್ಟ್ ಕೂಡಾ ಅಭಿಪ್ರಾಯಪಟ್ಟಿದೆ. ತನಿಖೆಗೆ ಮುಖ್ಯಮಂತ್ರಿ ಹಿಂಜರಿಯಬಾರದೆಂಬ ಹೈಕೋರ್ಟ್ ತೀರ್ಪಿನ ಅಂಶ ಉಲ್ಲೇಖಿಸಿ, ಗೋವಾ, ದಿಯು-ದಾಮನ್ ಭಾರತಕ್ಕೆ ಸೇರಿದಾಗ ಅನುಸರಿಸಿದ ಪ್ರಕ್ರಿಯೆ. ಯಾವ ಪ್ರಕ್ರಿಯೆ ಅನುಸರಿಸಬೇಕೆಂಬ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು. ಗೋವಾ, ದಿಯು-ದಾಮನ್ ಭಾರತಕ್ಕೆ ಸೇರುವ ಮುಂಚಿನ ಕಾನೂನು. ಅಲ್ಲಿ ನಡೆದ ಹಳೆ ಅಪರಾಧಗಳಿಗೆ ಅನ್ವಯಿಸಲಾಗಿತ್ತು. ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಪೋರ್ಚುಗೀಸ್ ಪ್ರೊಸಿಜರ್ ಕೋಡ್ ಅನ್ನು ಆಗ ಅನ್ವಯಿಸಲಾಗಿತ್ತು ಎಂದು ಅಭಿಪ್ರಾಯ ಪಟ್ಟು ಮೇಲಿನ ಆದೇಶವನ್ನು ನ್ಯಾಯಾಧೀಶರು ನೀಡಿದ್ದಾರೆ.