ಕೋವಿಶೀಲ್ಡ್ ಲಸಿಕೆ ಪಡೆದವರು ಕೂಲ್ಡ್ರಿಂಕ್ಸ್, ಐಸ್ಕ್ರೀಂ ಸೇವಿಸಬಾರದು ಎಂಬುದು ಸುಳ್ಳು ಸುದ್ದಿ: ಆರೋಗ್ಯ ಇಲಾಖೆ ಸ್ಪಷ್ಟನೆ
PC : NDTV
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ‘ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವವರು ತಂಪು ನೀರು, ಐಸ್ಕ್ರೀಂ ಮತ್ತು ತಂಪು ಪಾನೀಯಗಳನ್ನು ಸೇವಿಸಬಾರದು’ ಎಂದು ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಇಂತಹ ವದಂತಿಗಳನ್ನು ನಂಬಬೇಡಿ ಎಂದು ಆರೋಗ್ಯ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಕೋವಿಡ್ ಸಂದರ್ಭದಲ್ಲಿ ಕೋವಿಶೀಲ್ಡ್ ಹಾಕಿಸಿಕೊಂಡಿರುವವರು ತಂಪು ನೀರು, ಐಸ್ಕ್ರೀಂ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ ಎಂಬ ಸುಳ್ಳು ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ತಪ್ಪು ಮಾಹಿತಿ ಬಗ್ಗೆ ಜಾಗೃತಿ ವಹಿಸಿ. ಆರೋಗ್ಯ ಇಲಾಖೆಯು ಇಂತಹ ಯಾವುದೇ ಸೂಚನೆಯನ್ನು ಹೊರಡಿಸಿಲ್ಲ.
ಕೋವಿಶೀಲ್ಡ್ ಲಸಿಕೆ ಪಡೆದವರು ತಂಪು ಪಾನೀಯಗಳು, ಫ್ರಿಡ್ಜ್ ನೀರು ಹಾಗೂ ಐಸ್ ಕ್ರೀಂ ತಿನ್ನುವುದರಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ. ಹೀಗಾಗಿ, ಕಡ್ಡಾಯವಾಗಿ ಅವುಗಳನ್ನು ಸೇವಿಸದಂತೆ ಚಿಕ್ಕಬಳ್ಳಾಪುರದ ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ ಸೂಚನಾ ಪತ್ರದಲ್ಲಿ ಪ್ರಕಟಿಸಿತ್ತು.
ಆರೋಗ್ಯ ಇಲಾಖೆಯ ಮಾಹಿತಿ ತಿಳುವಳಿಕೆ ಪ್ರಕಾರ ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿದ್ದರಾಮಯ್ಯ ಕಾನೂನು ಕಾಲೇಜಿಗೆ ನೋಟಿಸ್ ನೀಡಿದೆ. ಜೊತೆಗೆ ಈ ಸುದ್ದಿಯನ್ನು ನಂಬಬಾರದು ಎಂದು ಪ್ರಕಟನೆ ತಿಳಿಸಿದೆ.