ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಹಣ ಪಡೆದರೆ ಕ್ರಿಮಿನಲ್ ಕೇಸ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಯಾರೇ ಅಸಡ್ಡೆ ತೋರಿದರೆ, ಜನರಿಂದ ದುಡ್ಡು ಪಡೆದರೆ ಅಂತವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ 3 ಜನರ ಲಾಗಿನ್ ಐಡಿ ವಾಪಸ್ ಪಡೆಯಲಾಗಿದೆ. ಸರಕಾರವಾಗಲಿ, ಇಲಾಖೆಯಾಗಲಿ ಸುಮ್ಮನೆ ಕುಳಿತಿಲ್ಲ. ಅಂತವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ಸಹ ದಾಖಲಿಸಲಾಗುವುದು ಎಂದು ಹೇಳಿದರು.
ಗೃಹ ಲಕ್ಷ್ಮೀ ಯೋಜನೆಯನ್ನು ಮಹಿಳೆಯರು ಉಚಿತವಾಗಿ ಮಾಡಿಸಿಕೊಳ್ಳಬೇಕೆಂದು ಬಹಳಷ್ಟು ಕಷ್ಟಪಟ್ಟು ಜಾರಿ ಮಾಡಿದ್ದೇವೆ. ಇದರಲ್ಲೂ ದುಡ್ಡು ಪಡೆಯುತ್ತಿರುವುದು ಗಮನಕ್ಕೆ ಬಂದರೆ ಅಂತವರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ವಾಪಸ್ ಪಡೆಯಲು ಸೂಚನೆ ಕೊಡಲಾಗಿದೆ. ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ತಹಶೀಲ್ದಾರ್, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಯಾರಿಗೇ ಆಗಲಿ ಹಣಪಡೆಯುವುದು ಗಮನಕ್ಕೆ ಬಂದರೆ ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ಅಸಡ್ಡೆ ಮಾಡಿದರೆ ಅವರೂ ಜವಾಬ್ದಾರರಾಗುತ್ತಾರೆ ಎಂದೂ ಸಚಿವರು ತಿಳಿಸಿದರು.
ನಾವು ಯಾರಿಂದಲೂ ಉಚಿತವಾಗಿ ಮಾಡಿಸಿಕೊಳ್ಳುತ್ತಿಲ್ಲ. ಅಪ್ ಲೋಡ್ ಮಾಡುವವರಿಗೆ ಸರಕಾರದಿಂದಲೇ ಪ್ರತಿ ಅರ್ಜಿಗೆ 12 ರೂ. ನೀಡಲಾಗುತ್ತಿದೆ. 10 ರೂ. ಅಪ್ ಲೋಡ್ ಮಾಡಲು, 2 ರೂ. ಪ್ರಿಂಟ್ ಔಟ್ ಕೊಡಲು ನೀಡಲಾಗುತ್ತಿದೆ. ಹಾಗಾಗಿ ಜನರು ಯಾರಿಗೂ ದುಡ್ಡು ಕೊಡಬೇಕಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.