ಸಿ.ಟಿ.ರವಿ ತಮ್ಮ ತಪ್ಪು ಒಪ್ಪಿಕೊಂಡು ರಾಜ್ಯದ ಜನರ ಕ್ಷಮೆ ಕೇಳಬೇಕು : ಡಿ.ಕೆ.ಸುರೇಶ್
ಡಿ.ಕೆ.ಸುರೇಶ್
ಬೆಂಗಳೂರು : ‘ಪರಿಷತ್ ಸದಸ್ಯ ಸಿ.ಟಿ.ರವಿ ಏನು ಬೇಕಾದರೂ ಆರೋಪ ಮಾಡುವುದು, ಮಾತು ತಿರುವುದರಲ್ಲಿ ನಿಸ್ಸಿಮರು. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ರಾಜ್ಯದ ಮಹಿಳೆಯರ ಕ್ಷಮೆ ಕೇಳುವುದು ಒಳ್ಳೆಯದು’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಮಾದಕ ವ್ಯಸನಿ ಅಂದಿದ್ದೂ ಆಯ್ತು. ಇವರನ್ನು ಕೊಲೆಗಡುಕ ಅಂದಿದ್ದೂ ಆಯ್ತು. ಅವರು ಮತ್ತೊಂದು ಪದ ಬಳಕೆ ಮಾಡಿದ್ದೂ ಆಯ್ತು. ಬಿಜೆಪಿ-ಆರೆಸ್ಸೆಸ್ ನವರು ಅದು ಯಾವುದನ್ನೂ ಖಂಡಿಸದೇ ರವಿ ಬಂಧನದ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆಂದು ದೂರಿದರು.
ಬಿಜೆಪಿ ನಾಯಕರಿಗೆ ಯಾವುದೇ ಲಂಗು-ಲಗಾಮು ಇಲ್ಲ. ಹೀಗಾಗಿಯೇ ಆ ಪಕ್ಷದ ನಾಯಕರು ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಆರೆಸೆಸ್ಸ್, ಬಿಜೆಪಿಯ ಸಂಸ್ಕೃತಿಯೇ?. ಪದೇ ಪದೆ ಬಿಜೆಪಿ ನಾಯಕರು ಈ ರೀತಿ ಹೆಣ್ಣು ಮಕ್ಕಳ ಮೇಲೆ ಮತ್ತು ಹೆಣ್ಣು ಮಕ್ಕಳ ಜೊತೆ ನಡೆದುಕೊಳ್ಳುವ ರೀತಿ ನೀತಿಗಳನ್ನು ರಾಜ್ಯದ ಜನರು ಗಮನಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ನಾಯಕರು ಹೆಣ್ಣು ಮಕ್ಕಳ ಮೇಲೆ ತೋರಿಸುವ ನಡವಳಿಕೆ ನೋಡಿದರೆ ಬಹುಶಃ ಅವರ ಮನೆಯಲ್ಲಿ ಅವರ ತಾಯಿ, ಹೆಂಡತಿ ಮತ್ತು ಹೆಣ್ಣು ಮಕ್ಕಳಿಗೂ ಗೌರವ ಕೊಡುವುದಿಲ್ಲ ಎಂದು ಕಾಣಿಸುತ್ತದೆ. ಇನ್ನಾದರೂ ಇಂತಹ ನಡವಳಿಕೆಗೆ ಕಡಿವಾಣ ಹಾಕಬೇಕು. ಬಿಜೆಪಿಯ ಒಬ್ಬೇ ಒಬ್ಬ ನಾಯಕನೂ ರವಿ ಹೇಳಿಕೆಯನ್ನು ಖಂಡಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಬಿಐ ತನಿಖೆ ಎನ್ನುವುದು ಬಿಜೆಪಿಯವರಿಗೆ ಅವರ ಮನೆಯೊಳಗಿನ ಸರಕು. ಮನೆ ಕೆಲಸದವರನ್ನು ಉಪಯೋಗಿಸುವಂತೆ ಸಿಬಿಐನವರನ್ನು ಬಳಸುತ್ತಿರುವ ಪ್ರವೃತ್ತಿ ಎದ್ದು ಕಾಣುತ್ತಿದೆ. ಅಂಬೇಡ್ಕರ್ ಮೇಲಿನ ಹೇಳಿಕೆಯನ್ನು ಮರೆಮಾಚಲು ಬಿಜೆಪಿಯವರು ಕುತಂತ್ರವನ್ನು ಮಾಡುತ್ತಿದ್ದಾರೆ. ಸಿ.ಟಿ.ರವಿ ಕೆಲ ವಿಚಾರದಲ್ಲಿ ಪ್ರಚಲಿತರು. ಅವರ ಜೊತೆ ಒಡನಾಟ ಇಟ್ಟುಕೊಂಡವರೆಲ್ಲ ಇತಿಹಾಸ ಇರುತಕ್ಕಂತವರು ಎಂದು ಸುರೇಶ್ ಆರೋಪಿಸಿದರು.
ಸಿ.ಟಿ.ರವಿ ಆತಂಕವಿದ್ದರೆ ಎಸ್ಪಿಜಿ ಭದ್ರತೆ ತೆಗೆದುಕೊಳ್ಳಲಿ. ಇಲ್ಲವಾದರೆ ರಾಜ್ಯದ ಪೊಲೀಸರ ರಕ್ಷಣೆ ಪಡೆದು ಹಿಂದೆ ಒಂದು ವ್ಯಾನ್, ಮುಂದೆ ಒಂದು ವ್ಯಾನ್ ಹಾಕಿಸಿಕೊಂಡು ತಿರುಗಾಡಲಿ, ಬೇಡ ಅಂದವರು ಯಾರು?. ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವೆಂದರೆ ಎಸ್ಪಿಜಿ ರಕ್ಷಣೆ ಕೇಳಲಿ’ ಎಂದು ಡಿ.ಕೆ.ಸುರೇಶ್ ಲೇವಡಿ ಮಾಡಿದರು.