ಕಾವೇರಿ ನೀರು | ಏನೇ ಆದೇಶ ಬಂದರೂ ನಮ್ಮ ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಡಿ.ಕೆ.ಶಿವಕುಮಾರ್
ಮೈಸೂರು:,ಅ.11: ರಾಜ್ಯದ ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿಯಿಂದ ಏನೇ ಆದೇಶ ಬಂದರೂ ನಮ್ಮ ರೈತರ ಹಿತ ಕಾಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ದಸರಾ ಕ್ರೀಡಾಕೂಟ ಉದ್ಘಾಟನೆಗೆ ಬುಧವಾರ ಮೈಸೂರಿಗೆ ಆಗಮಿಸಿದ ಅವರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮತ್ತೆ ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದಲ್ಲಿ ಎಷ್ಟು ಟಿಎಂಸಿ ನೀರು ಇದೆ ಅಂತ ದಾಖಲೆ ತೆಗೆದುಕೊಂಡಿದ್ದಾರೆ. ಅವರ ಜಲಾಶಯದ ಮಾಹಿತಿ ಕೂಡ ಪಡೆದುಕೊಂಡಿದ್ದಾರೆ. ನಮ್ಮ ಜಲಾಶಯಗಳಿಗೆ 7ರಿಂದ 10ಸಾವಿರ ಕ್ಯೂಸೆಕ್ಸ್ ಒಳ ಹರಿವಿದೆ. ನಮ್ಮ ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಬಿಳಿಗುಂಡ್ಲಿಗೆ ಎರಡು ದಿನ ಕಡಿಮೆ ನೀರು ಹೋಗಿದೆ. ಬೆಂಗಳೂರಿಗೆ ಮಳೆಯಾದ ಕಾರಣ ಅದು ಬ್ಯಾಲೆನ್ಸ್ ಆಗಿದೆ. ಅದನ್ನು ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದೇವೆ. ಏನೇ ಆದೇಶ ಬಂದರೂ ಕರ್ನಾಟಕದ ರೈತರ ಹಿತ ಕಾಯುತ್ತೇವೆ ಎಂದು ನುಡಿದರು.
ಮೇಕೆದಾಟು ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡಲ್ಲ. ಕೇಂದ್ರಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಮೇಕೆದಾಟು ಯೋಜನೆ ಜಾರಿಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ವಿಚಾರವಾಗಿ ನ್ಯಾಯಾಲಯದ ಮುಂದೆ ವಾದ ಮಾಡುತ್ತಿದ್ದೇವೆ. ಕೋರ್ಟ್ ಮುಂದೆ ಮತ್ತಷ್ಟು ವಾದ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯ ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅವರು ಡ್ಯಾಂ ಕಟ್ಟಿ ನಿಮಗೆ(ತಮಿಳುನಾಡು) 170 ಟಿಎಂಸಿ ನೀರು ಕೊಡುತ್ತಾರೆ ಎಂದು ಮನದಟ್ಟು ಮಾಡಿದೆ ಎಂದು ಹೇಳಿದರು.
ಜಲಾಶಯ ಕಟ್ಟಲು ಭೂಮಿ ತೆಗೆದುಕೊಂಡು ವ್ಯವಸ್ಥೆ ಮಾಡುತ್ತಿದ್ದೇವೆ. ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಬೇಕು. ನಮ್ಮ ಜಮೀನಿನಲ್ಲಿ ನಾವು ಏನು ಬೇಕಾದರೂ ಮಾಡಬಹುದು. ಸರ್ವೆ ಮಾಡಲು ಯಾರ ಅನುಮತಿಯೂ ಬೇಕಾಗಿಲ್ಲ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.
ನಮ್ಮ ಭೂಮಿಯಲ್ಲಿ ಎಷ್ಟು ಗಿಡಗಳಿವೆ, ಮರಗಳಿವೆ ಮತ್ತು ಜಮೀನುಗಳಿವೆ ಎಂಬುದನ್ನು ಸರ್ವೆ ಮಾಡಲು ಯಾರ ಅನುಮತಿ ಬೇಕಿಲ್ಲ. ಕೆಲವು ಆಂತರಿಕ ವಿಚಾರಗಳನ್ನು ಮುಕ್ತವಾಗಿ ಮಾತನಾಡಲು ಆಗಲ್ಲ. ಸರ್ವೆ ನಡೆಯುತ್ತಿದೆ. ಅಂತಿಮವಾದ ಮೇಲೆ ಹೇಳುತ್ತೇವೆ ಎಂದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಮಳೆಬಾರದ ಕಾರಣ ಬರಬಂದಿದೆ. ಕಳೆದ ಬಾರಿಗಿಂತ ಅರ್ಧದಷ್ಟು ಮಳೆ ಬಂದಿದೆ. ಕಳೆದ ಬಾರಿ ಡಬಲ್ ಮಳೆಯಾಗಿತ್ತು. ಹೀಗಾಗಿ, ಈ ಬಾರಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಆದರೂ,ಸರ್ಕಾರ ಇದನ್ನು ಸರಿದೂಗಿಸಿಕೊಂಡು ರೈತರು ಮತ್ತು ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡಲಿದೆ ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ, ಶಾಸಕ ದರ್ಶನ್ ಧ್ರುವನಾರಾಯಣ ಹಾಜರಿದ್ದರು.