ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆಗೆ ರಾಜ್ಯ ಸರಕಾರಕ್ಕೆ ಗಡುವು ನೀಡಿದ ಡಿ. ಕೆಂಪಣ್ಣ
ಡಿ. ಕೆಂಪಣ್ಣ
ಬೆಂಗಳೂರು, ಆ.11: ಗುತ್ತಿಗೆದಾರರ ಬಾಕಿ ಹಣ ಪಾವತಿ ವಿಳಂಬ ಬಗ್ಗೆ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಡಿ. ಕೆಂಪಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಆಗಸ್ಟ್ 31ರೊಳಗೆ ಗುತ್ತಿಗೆದಾರರಿಗೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕು'' ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
''ಕೋಟಿ ಕೋಟಿ ರೂಪಾಯಿಗಳನ್ನು ಬ್ಯಾಂಕ್, ಖಾಸಗಿ ಮತ್ತಿತರ ಮೂಲಗಳಿಂದ ಸಾಲ ತಂದು ಕಾಮಗಾರಿಗಳನ್ನು ಮುಗಿಸಲಾಗಿರುತ್ತದೆ. ಹಲವಾರು ಪ್ರಕರಣಗಳಲ್ಲಿ ಮನೆ, ಚಿನ್ನ ನಿವೇಶನಗಳ ಪತ್ರಗಳನ್ನು ಅಡವಿಟ್ಟು ಸಾಲ ಮಾಡಲಾಗಿರುತ್ತದೆ. ಕೆಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲೆಂದೇ ಹಣವನ್ನು ಎತ್ತಿ ಇಡಲಾಗಿದೆ. ಉದಾಹರಣೆಗೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲೆಂದೇ ಸರಕಾರ ಬಿಬಿಎಂಪಿಗೆ ರೂ. 675 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೂ ಸರಕಾರ ಬಿಬಿಎಂಪಿ ಆಯುಕ್ತರು ಮೇಲಿನಿಂದ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
''ಹಣ ಬಿಡುಗಡೆಯಾಗುವುದು ಎರಡು ಮೂರು ತಿಂಗಳು ತಡವಾದರೂ ಗುತ್ತಿಗೆದಾರರಿಗೆ ಸಿಗುವ ಲಾಭ ಬಡ್ಡಿಗೆ ಹೋಗುತ್ತದೆ. ಇಂತಹ ಕಷ್ಟಗಳನ್ನು ಯಾರಲ್ಲಿ ಹೇಳಿಕೊಳ್ಳಬೇಕು? ಗುತ್ತಿಗೆದಾರರು ಆಶಾಭಾವನೆಯಿಂದ ಜಾತಕಪಕ್ಷಿಗಳಂತೆ ಸರಕಾರ ಬಾಕಿ ಹಣ ಬಿಡುಗಡೆ ಮಾಡುವುದನ್ನೇ ಕಾಯುತ್ತಿದ್ದಾರೆ'' ಎಂದು ಕೆಂಪಣ್ಣ ಹೇಳಿದರು.