ಸಮೀಕ್ಷಾ ತಂಡದಿಂದ 3-4 ತಿಂಗಳಲ್ಲಿ ಲೋಕಸಭಾ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ: ಡಿ.ಕೆ. ಶಿವಕುಮಾರ್
ಹುಬ್ಬಳ್ಳಿ: ʼಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಸಮೀಕ್ಷಾ ತಂಡವು 3-4 ದಿನಗಳೊಳಗೆ ತನ್ನ ವರದಿ ಸಲ್ಲಿಸಲಿದೆʼ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
"ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಸಚಿವರುನ್ನು ಆಯಾ ಜಿಲ್ಲೆಗೆ ಕಳುಹಿಸಿದ್ದೇವೆ. ಅವರು ನಮಗೆ ವರದಿ ನೀಡಲಿದ್ದಾರೆ. ಶೆ.75ರಷ್ಟು ಮಂದಿ ನಮ್ಮ ಕಾರ್ಯಕರ್ತರು, ಶಾಸಕರು, ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ದೆಹಲಿ ನಾಯಕರು ನಮಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ. ಅದರ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಕೆಲವು ಮಾನದಂಡ ನಿಗದಿ ಮಾಡಿದ್ದೇವೆ" ಎಂದು ತಿಳಿಸಿದರು.
ಪಕ್ಷದಲ್ಲಿ ಇರುವ ಅಸಮಾಧಾನ ಹೇಗೆ ಪರಿಹರಿಸಿಕೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಮ್ಮ ಪಕ್ಷದಲ್ಲಿ ಎಲ್ಲಿ ಅಸಮಾಧಾನ ಇದೆ? ಬಿಜೆಪಿಯಲ್ಲಿ ಅಸಮಾಧಾನ ಇದ್ದು, ಅದರಿಂದ ಅವರ ನಾಯಕರ ಆಯ್ಕೆ ಮಾಡಲು ಆಗುತ್ತಿಲ್ಲ. ಈ ಬಗ್ಗೆ ನೀವು ಪ್ರಶ್ನೆ ಮಾಡುತ್ತಿಲ್ಲ. ಸರಕಾರ ರಚನೆ ಆಗಿ ಐದಾರು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆ ಆಗದ ಇತಿಹಾಸವನ್ನು ರಾಜ್ಯ ಅಥವಾ ದೇಶದಲ್ಲಿ ನೋಡಿದ್ದೀರಾ?" ಎಂದು ಪ್ರಶ್ನೆ ಮಾಡಿದರು.