ದಾವಣಗೆರೆ| ಸಿಇಎನ್ ಪೊಲೀಸರಿಂದ ದಾಳಿ: ಎಂಡಿಎಂಎ, ಹುಲಿ ಉಗುರುಗಳ ವಶ
ಆರು ಮಂದಿ ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
ದಾವಣಗೆರೆ: ಎಂಡಿಎಂಎ ಮಾದಕ ವಸ್ತು ಮತ್ತು ಹುಲಿ ಉಗುರು ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿರುವ ಸಿಇಎನ್ ಪೊಲೀಸರು ಆರು ಜನರನ್ನು ಬಂಧಿಸಿ, 49 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು 6 ಹುಲಿ ಉಗುರುಗಳನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ಬಂಧಿತರನ್ನು ಅಶೋಕ್ ಕುಮಾರ್, ರಮೇಶ್ ಕುಮಾರ್, ಎಂ.ಆರ್. ಲೋಕೇಶ್, ಕಾರ್ತಿಕ್, ರಾಮ್ ರತನ್, ಸುನೀಲ್ ಕುಮಾರ್ ಎಂದು ತಿಳಿದು ಬಂದಿದೆ.
ನಗರದ ಜಿ. ಮಲ್ಲಿಕಾರ್ಜುನಪ್ಪ ಬಡಾವಣೆಯ ಎನ್.ಎಚ್.48 ಸರ್ವಿಸ್ ರಸ್ತೆ ಕಡೆಯಿಂದ ಮಯೂರು ಗ್ಲೋಬಲ್ ಶಾಲೆಯ ಕಡೆಗೆ ಹೋಗುವ ರಸ್ತೆಯಲ್ಲಿ ಯಾರೋ ವ್ಯಕ್ತಿಗಳು ಎಂಡಿಎಂಎ ಮಾದಕ ವಸ್ತುವನ್ನು ಇಟ್ಟುಕೊಂಡು ಸೇವನೆ ಮಾಡುತ್ತಿರುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮೇಲಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಎಂಡಿಎಂಎ ಮತ್ತು 1 ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಸಾದ್ ಪಿ. ಮತ್ತು ಸಿಬ್ಬಂದಿಯವರಾದ ಪ್ರಕಾಶ್, ನಾಗರಾಜ, ಮುತ್ತುರಾಜ್, ಗೋವಿಂದರಾಜ್, ಮಲ್ಲಿಕಾರ್ಜುನ, ಲಿಂಗರಾಜ್ ಹಾಗೂ ತಾಂತ್ರಿಕ ಸಿಬ್ಬಂದಿಯವರಾದ ರಾಘವೇಂದ್ರ, ಶಾಂತರಾಜ್, ರಾಮಚಂದ್ರ ಜಾಧವ್ ಅವರನ್ನೊಳಗೊಂಡ ತಂಡ ಆರೋಪಿಗಳ ಮಾಹಿತಿಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಬಸವೇಶ್ವರ ಬಡಾವಣೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಎಂಡಿಎಂಎ ಮಾದಕ ವಸ್ತುವನ್ನು ಮತ್ತು ಮೇಲ್ನೋಟಕ್ಕೆ ಹುಲಿಯ ಉಗುರಿನಂತೆ ಕಾಣುವ 6 ಹುಲಿ ಉಗುರುಗಳನ್ನು ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ 49 ಗ್ರಾಂ ಎಂಡಿಎಂಎ ಮಾದಕ ವಸ್ತು (ಅಂದಾಜು ಮೌಲ್ಯ 3.20 ಲಕ್ಷ ರೂ), 6 ಹುಲಿ ಉಗುರು, 4 ಮೊಬೈಲ್ ಗಳು, 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 7,20,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ತನಿಖೆ ಮುಂದುವರಿಸಲಾಗಿದೆ.
ಆರೋಪಿಗಳನ್ನು ಪತ್ತೆ ಮಾಡಿ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ್ ಎಂ. ಸಂತೋಷರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.