ದಾವಣಗೆರೆ | ʻಗೃಹಲಕ್ಷ್ಮಿ' ಭಾಗ್ಯದಿಂದ ವಂಚಿತರಾದ 22 ಸಾವಿರ ಮಹಿಳೆಯರು
ದಾವಣಗೆರೆ: ಕರ್ನಾಟಕ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಆರಂಭಗೊಂದು ಎರಡು ತಿಂಗಳು ಕಳೆದರೂ ಕೂಡ ಜಿಲ್ಲೆಯಲ್ಲಿ 22 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಭಾಗ್ಯದಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಗೃಹಿಣಿಯರು ಪದೇ ಪದೇ ಅರ್ಜಿ ಸಲ್ಲಿಸಿ, ಬೇಸತ್ತು ಹೋಗಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಅಡಿ ದಾವಣಗೆರೆ ಜಿಲ್ಲೆಯಲ್ಲಿ ಈವರೆಗೂ ಒಟ್ಟು 3,86,716 ಜನ ಪಡಿತರ ಫಲಾನುಭವಿಗಳಲ್ಲಿ 3,41,969 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. ಯೋಜನೆ ಆರಂಭವಾದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ 64.80 ಕೋಟಿ ರೂ.ನಲ್ಲಿ 60.68 ಕೋಟಿ ರೂ. 3,05,557 ಫಲಾನುಭವಿಗಳ ಬ್ಯಾಂಕ್ ಖಾತೆ ಜಮಾ ಆಗಿದೆ.
ಅದೇ ರೀತಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ 65.09 ಕೋಟಿ ರೂ.ನಲ್ಲಿ 3,029,30 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ. ಆದರೆ ಆಗಸ್ಟ್ ತಿಂಗಳಲ್ಲಿ ನೋಂದಣಿಯಾದ 18,489 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗದೆ 3.69 ಕೋಟಿ ಹಣ ಹಾಗೆಯೇ ಉಳಿದರೆ, ಸೆಪ್ಟೆಂಬರ್ ತಿಂಗಳಲ್ಲಿ ನೋಂದಣಿಯಾದ 22,566 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗದೆ 4.51 ಕೋಟಿ ರೂ. ಉಳಿದಿದೆ.
ಕಾರಣ ಅರ್ಜಿದಾರರ ಆಧಾರ್ ಮತ್ತು ಬ್ಯಾಂಕ್ ಖಾತೆಗೆ ನೀಡಿರುವ ಹೆಸರಿನಲ್ಲಿ ವ್ಯತ್ಯಾಸಗಳು ಕಂಡು ಬಂದಿವೆ. ಹೀಗಾಗಿ ನಾನಾ ಕಾರಣಗಳಿಂದ ಅರ್ಜಿ ಸಲ್ಲಿಕೆ ಮಾಡಿದ್ದವರ ಪೈಕಿ ಜಿಲ್ಲೆಯಲ್ಲಿ ಇದುವರೆಗೆ ಕಳೆದ ಎರಡು ತಿಂಗಳು ಒಟ್ಟು 22 ಸಾವಿರ ಅರ್ಜಿದಾರರ ಬ್ಯಾಂಕ್ ಖಾತೆಗೆ ಇನ್ನೂ ಹಣ ಜಮೆ ಆಗಿಲ್ಲ ಎಂದು ದಾವಣಗೆರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀಕ್ಷಕ ಮುತ್ತುರಾಜ್ ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿನ ಲೋಪದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಹಲವು ಬಾರಿ ಅವಕಾಶಗಳನ್ನು ನೀಡಿದೆ. ಆದರೆ ಕೆಲವು ಮಹಿಳೆಯರು ಲೋಪದೋಷಗಳನ್ನು ಸರಿಪಡಿಸಿಕೊಂಡಿಲ್ಲ. ಹೀಗಾಗಿ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಜೊತೆಗೆ ಅಂಚೆ ಕಚೇರಿಯಲ್ಲಿ ಕೆಲವರು ಖಾತೆಯನ್ನು ತೆರೆದಿದ್ದು, ತಮ್ಮ ಖಾತೆಯನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿಲ್ಲ. ಜೊತೆಗೆ ಪಡಿತರ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡದೇ ಇದ್ದರೂ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗುವುದಿಲ್ಲ.
ಜುಲೈ ತಿಂಗಳಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿಯನ್ನು ಆರಂಭಿಸಲಾಗಿತ್ತು. ಆದರೆ ಆರಂಭದಿಂದಲೂ ಗೃಹಿಣಿಯರು ಅರ್ಜಿಸಿದ ಬಳಿಕ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಲೇ ಇದೆ. ಕೆಲವರು ಎರಡು ಮೂರು ಬಾರಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾಂಕ್‍ಗಳಲ್ಲಿ ಖಾತೆಯನ್ನು ತೆರೆದಿರುವ ಮಹಿಳೆಯರು ತಮ್ಮ ಖಾತೆಯನ್ನು ಇ-ಕೆವೈಸಿ ಮಾಡುವುದನ್ನು ಮರೆತಿರಬಹುದು. ಕೆಲವರು ಆಧಾರ್ ಸೀಡಿಂಗ್ ಮಾಡಿಸದಿರಬಹುದು. ಕೂಡಲೇ ಇ-ಕೆವೈಸಿ, ಆಧಾರ್ ಸೀಡಿಂಗ್ ಮಾಡಿಸಿ ಸರಿಪಡಿಸಿಕೊಳ್ಳಬೇಕು.
-ವಾಸಂತಿ ಉಪ್ಪಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ದಾವಣಗೆರೆ
----------------------------
ʼರಾಜ್ಯ ಸರಕಾರ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ. ಅದರೆ, ನಾವು ಅರ್ಜಿ ಸಲ್ಲಿಸಿದ್ದರೂ ನಮಗೆ ಯೋಜನೆಯ ಲಭಿಸಿಲ್ಲ. ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆʼʼ
- ಮುನ್ನಿಬಾನು, ದಾವಣಗೆರೆ
----------------------------
ʼʼಗೃಹಲಕ್ಷ್ಮೀ ಯೋಜನೆ ಹಣ ಬೇರೆಯವರ ಖಾತೆಗಳಿಗೆ ಜಮಾ ಆಗಿದೆ. ಅದರೆ, ನಮಗೆ ಸಿಕ್ಕಿಲ್ಲ. ನಾವು ಬಡವರು ನಮಗೆ ಸರಕಾರದ ಯೋಜನೆ ದೊರೆತರೆ ನಮಗೆ ಸಹಾಯವಾಗಲಿದೆ. ಅದ್ದರಿಂದ ಸರಕಾರ ಈ ಬಗ್ಗೆ ಗಮನ ಹರಿಸಬೇಕುʼʼ
ರೇಣುಕಾ, ದಾವಣಗೆರೆ