ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ, ಇನ್ಸ್ಪೆಕ್ಟರ್, ಸಿಬ್ಬಂದಿ
ಬಂಧಿತ ಅಧಿಕಾರಿಗಳು
ದಾವಣಗೆರೆ : ಮದ್ಯದ ಅಂಗಡಿ ಆರಂಭಿಸಲು ಪರವಾನಿಗೆ ನೀಡಲು ಹರಿಹರ ಮೂಲದ ಡಿ.ಜಿ.ರಘುನಾಥ ಎಂಬುವರಿಂದ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಅಬಕಾರಿ ಡಿಸಿ ಸ್ವಪ್ನ ಹಾಗೂ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ಇರುವ ಅಬಕಾರಿ ಇಲಾಖೆ ಕಚೇರಿ ಸಿಬ್ಬಂದಿ ಎಚ್ ಎಂ ಅಶೋಕ ಎಂಬುವರ ಮೂಲಕ ಅಬಕಾರಿ ಡಿಸಿ ಸ್ವಪ್ನ ಲಂಚಸ್ವೀಕರಿಸುವ ಬಲೆಗೆ ಬಿದ್ದಿದ್ದಾರೆ. ಲಂಚದಲ್ಲಿ ಪಾಲು ಹೊಂದಿದ್ದ ಹರಿಹರ ಅಬಕಾರಿ ಇಲಾಖೆ ನಿರೀಕ್ಷಕಿ ಶೀಲಾ, ಕಚೇರಿ ಸಿಬ್ಬಂದಿ ಶ್ರೀಶೈಲಾ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ :
ರಂಗನಾಥ ಎಂಬುವವರು ಹರಿಹರದ ಅಮರಾವತಿ ಬಳಿ ಮದ್ಯದಂಗಡಿ ಆರಂಭಿಸಲು ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದರು. ಪರವಾನಿಗೆ ನೀಡಲು ಹರಿಹರ ಅಬಕಾರಿ ಇಲಾಖೆ ನಿರೀಕ್ಷಕಿ ಶೀಲಾ, ಕಚೇರಿ ಸಿಬ್ಬಂದಿ ಶ್ರೀಶೈಲಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅರ್ಜಿದಾರರಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃದಲ್ಲಿ ಲೋಕಾಯುಕ್ತ ನಿರೀಕ್ಷಕರಾದ ಪ್ರಭು ಸೂರಿನ್, ಮಧುಸೂಧನ್ ಹಾಗೂ ಎಚ್ ಎಸ್ ರಾಷ್ಟ್ರಪತಿ ಸೇರಿದಂತೆ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು. ಭ್ರಷ್ಟಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.