ದಾವಣಗೆರೆ: ಆನ್ಲೈನ್ ಬ್ಯುಸಿನೆಸ್ ಹೆಸರಲ್ಲಿ ವಂಚನೆ ಪ್ರಕರಣ ಹೆಚ್ಚಳ
ದಾವಣಗೆರೆ, ನ.9: ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಮುಖವಾಗಿ ಇತ್ತೀಚೆಗೆ ವರ್ಕ್ ಫ್ರಂ ಹೋಮ್, ಟೆಲಿಗ್ರಾಂ ಆ್ಯಪ್, ಲೋನ್ ಆ್ಯಪ್, ಒಎಲ್ಎಕ್ಸ್ ಅನ್ನು ಅಸ್ತ್ರವನ್ನಾಗಿಸಿಕೊಂಡಿರುವ ವಂಚಕರು ನಾಗರಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ರೀತಿಯ ವಂಚನೆಗಳಿಂದ ವರ್ಷದಲ್ಲಿ ಒಟ್ಟು 55 ಪ್ರಕರಣಗಳು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿ, ನಾಗರಿಕರು 3,48,07707 ರೂ. ಕಳೆದುಕೊಂಡಿದ್ದು, ಅದರಲ್ಲಿ 16 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟು 47,67,393 ರೂ.ಗಳನ್ನು ವರಸುದಾರರಿಗೆ ಹಿಂದುರುಗಿಸಲಾಗಿದೆನ್ನಲಾಗಿದೆ.
ಪ್ರಮುಖವಾಗಿ ಬ್ಯುಸಿನೆಸ್ ವಂಚನೆಯಲ್ಲಿ ಅತೀ ಹೆಚ್ಚು ಅಂದರೆ 17 ಪ್ರಕರಣಗಳು ದಾಖಲಾಗಿ, ದೂರುದಾರರು 1,57,61183 ರೂ.ಗಳನ್ನು ಕಳೆದುಕೊಂಡಿದ್ದಾರೆ. ಅದರಲ್ಲಿ 6 ಪ್ರಕರಣಗಳನ್ನು ಪತ್ತೆ ಹಚ್ಚಿ 23,04071 ರೂ.ಗಳನ್ನು ವರಸುದಾರರಿಗೆ ಹಿಂದುರುಗಿಸಲಾಗಿದೆ. ಅದೇ ರೀತಿ 6 ಗಿಫ್ಟ್ ವಂಚನೆ ಪ್ರಕರದಲ್ಲಿ 30,49,016 ರೂ., 6 ಜಾಬ್ ವಂಚನೆ ಪ್ರಕರಣದಲ್ಲಿ 65,72,024 ರೂ., 3 ಒಟಿಪಿ ವಂಚನೆ ಪ್ರಕರಣದಲ್ಲಿ 23,50,393 ರೂ., 3 ಲಿಂಕ್ ವಂಚನೆ ಪ್ರಕರಣದಲ್ಲಿ 20,33,233 ರೂ., 3 ಕಮಿಷನ್ ವಂಚನೆ ಪ್ರಕರಣದಲ್ಲಿ 12,54,783 ರೂ.ಗಳನ್ನು ದೂರುದಾರರು ಕಳೆದುಕೊಂಡಿದ್ದಾರೆ.
ಇನ್ನು ಕ್ರೆಡಿಟ್ ಕಾರ್ಡ್, ಒಎಲ್ಎಕ್ಸ್, ಜಿಯೋ ಟವರ್ ಸಂಪರ್ಕ, ಫೋನ್ ಕಳವು ಮಾಡಿ ಆನ್ಲೈನ್ ಮೂಲಕ ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 9,71,215ರೂ.ಗಳನ್ನು ನಾಗರಿಕರಿಂದ ದೋಚಿದ್ದಾರೆ ಎಂದು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪಿಐ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಹೋಟೆಲ್ ಬುಕ್ಕಿಂಗ್ ಲ್ಲಿ ವಂಚನೆ
ಕಳೆದ ಮೂರು ತಿಂಗಳ ಹಿಂದೆ ದಾವಣಗೆರೆಯ 300 ಜನ ಗೋವಾ ಪ್ರವಾಸ ಹೋಗಲು ನಿರ್ಧರಿಸಿದ್ದರು. ಆಗ ಒಂದು ತಿಂಗಳು ಮುಂಚೆ ಹೋಟೆಲ್ ಬುಕ್ ಮಾಡಲು ಒಂದು ಫೈವ್ಸ್ಟಾರ್ ಹೋಟೆಲ್ ಆಯ್ಕೆ ಮಾಡಿ, ಅಲ್ಲಿ ನಮೂದಿಸಿದ್ದ ಮೊಬೈಲ್ ನಂಬರ್ ಸಂಪರ್ಕಿಸಿದಾಗ ಕಚೇರಿ ವ್ಯವಸ್ಥಾಪಕ ಹೋಟೆಲ್ ನಲ್ಲಿ ಉಳಿದುಕೊಳ್ಳುವ ಎಲ್ಲಾ ಮಾಹಿತಿ, ಅವರಿಗೆ ನಂಬಿಕೆ ಬರುವ ರೀತಿ ಮಾತುಕತೆ ನಡೆಸಿದ್ದಾನೆ. ಕೊನೆಗೆ ಮುಂಗಡ ಹಣ 8 ಲಕ್ಷ ರೂ. ಪಾವತಿಸಬೇಕೆಂದು ಹೇಳಿದ್ದಾನೆ. ಆಗ ಕುಟುಂಬದ ಯಜಮಾನ ಅವರು ಹೇಳಿದಂತೆ 8 ಲಕ್ಷ ರೂ. ಹೋಟೆಲ್ ಖಾತೆಗೆ ಜಮಾ ಮಾಡಿದ್ದಾರೆ. ತಿಂಗಳು ಕಳೆದ ಮೇಲೆ ಅವರು ಕೊಟ್ಟ ನಂಬರ್ಗೆ ಫೋನ್ ಮಾಡಿದಾಗ ಸ್ವೀಚ್ ಆಪ್ ಬಂದಿದ್ದು, ಆಗ ಯಜಮಾನನಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಇದೊಂದು ಉದಾಹರಣೆಯಷ್ಟೇ. ಇಂತಹ ಹಲವಾರು ವಂಚನೆ ಪ್ರಕರಣಗಳು ನಡೆಯುತ್ತವೆ. ಸಾರ್ವಜನಿಕರು ಜಾಗೃತರಾಗಬೇಕು.
''ವರ್ಕ್ ಫ್ರಂ ಹೋಮ್, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಲೋನ್ ಆ್ಯಪ್ ಹೆಸರಿನಲ್ಲಿ ಸೈಬರ್ ಜಾಲ ಸಕ್ರಿಯಗೊಂಡಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ ಗ್ರೂಪ್ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಲಾಗುತ್ತಿದೆ. ಜಾಲಕ್ಕೆ ಸಿಲುಕಿದವರಿಗೆ ದುಪ್ಪಟ್ಟು ಹಣ ಗಳಿಸುವ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿಕೊಂಡು ಕೋಟಿಗಟ್ಟಲೆ ದೋಚುತ್ತಿರುವುದು ಬಯಲಾಗುತ್ತಿದೆ ಸಾರ್ವಜನಿಕರು ಜಾಗೃತರಾಗಬೇಕು''
- ಪ್ರಸಾದ್, ಪಿಐ, ಸಿಇಎನ್ ಸೈಬರ್ ಅಪರಾಧ ಠಾಣೆ, ವಿದ್ಯಾನಗರ