ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣೆ ಮನದಟ್ಟು ಮಾಡಿದೆ : ಡಿಕೆಶಿ
"ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ"
ಬೆಂಗಳೂರು: 10 ವರ್ಷಗಳ ನಂತರ ಕಾಂಗ್ರೆಸ್ ಪಕ್ಷ 100ರ ಗಡಿ ದಾಟಿದ್ದು, ಜನರು ಮತ್ತೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣೆ ಮನದಟ್ಟು ಮಾಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಲೋಕಸಭೆ ಚುನಾವಣೆ ಫಲಿತಾಂಶದ ಕುರಿತಂತೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಮೋದಿ ಹಾಗೂ ರಾಮಮಂದಿರದ ಅಲೆ ಇಲ್ಲವಾಗಿದೆ ಎಂಬುದನ್ನು ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ರಾಜ್ಯ ಹಾಗೂ ದೇಶದಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಂತಾಗಿದೆ. ದೇಶದಲ್ಲಿ ಭಾವನೆ ಸೋತಿದ್ದು, ಬದುಕು ಗೆದ್ದಿದೆ. ಬಿಜೆಪಿಯವರು 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಅದು ಸಾಧ್ಯವಾಗಿಲ್ಲ. ಅಯೋದ್ಯೆಯಲ್ಲೇ ಬಿಜೆಪಿ ಸೋತಿದೆ.
ಮಂಜುನಾಥ್ ಅವರಿಗೆ ಅಭಿನಂದನೆಗಳು:
ರಾಜ್ಯದಲ್ಲಿ ನಾವು 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆ ಕಂಡಿದ್ದೇವೆ. ನಾವು 14 ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ನನ್ನ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರ ಗೆಲುವಿಗೆ ವೈಯಕ್ತಿಕವಾಗಿ ಅವರಿಗೆ ಅಭಿನಂದಿಸುತ್ತೇನೆ. ಅವರ ಪಕ್ಷ ಗೆಲ್ಲುವುದಕ್ಕಿಂತ ಇಲ್ಲಿ ವ್ಯಕ್ತಿ ಗೆದ್ದಿದ್ದಾರೆ. ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಇಷ್ಟು ದೊಡ್ಡ ಅಂತರದ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಮ್ಮ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಜನ ಅವರನ್ನು ಗೆಲ್ಲಿಸಿದ್ದಾರೆ ಎಂದರು.