ರಾಜ್ಯದ ಅಣೆಕಟ್ಟುಗಳ ಸುರಕ್ಷತೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ : ಡಿಸಿಎಂ ಡಿ.ಕೆ.ಶಿವಕುಮಾರ್
ವಿಜಯಪುರ : ರಾಜ್ಯದ ಅಣೆಕಟ್ಟುಗಳ ಸುರಕ್ಷತೆ ಪರಿಶೀಲನೆಗಾಗಿ ಕೇಂದ್ರ ತಂಡ ಹಾಗೂ ಮಾಜಿ ಸಿಡಬ್ಲ್ಯೂಸಿ ಸದಸ್ಯರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ಎಲ್ಲ ಅಣೆಕಟ್ಟುಗಳನ್ನು ಪರಿಶೀಲಿಸಲು ಈ ತಂಡ ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ವಿಜಯಪುರದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ(ಆಲಮಟ್ಟಿ)ಅಣೆಕಟ್ಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂಡಿ ಬಾಗಿನ ಅರ್ಪಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ವರದಿಯ ಆಧಾರದ ಮೇಲೆ ಅಣೆಕಟ್ಟುಗಳ ಸುರಕ್ಷತೆಗೆ ಸರಕಾರ ಕೆಲಸ ಮಾಡಲಿದೆ. ನಾರಾಯಣಪುರ ಅಣೆಕಟ್ಟೆಯ ಗೇಟುಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಗಂಗಾ ಆರತಿ ಮಾದರಿಯಲ್ಲಿ ಕೃಷ್ಣಾ ಆರತಿ: ಗಂಗಾ ಆರತಿ ಮಾದರಿಯಲ್ಲಿ ಕೃಷ್ಣಾ ಆರತಿ ಕಾರ್ಯಕ್ರಮ ನಡೆಸಬೇಕು ಎಂದು ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಮತ್ತು ಆರ್.ಬಿ.ತಿಮ್ಮಾಪುರ ಸೇರಿದಂತೆ ಶಾಸಕರು ಮನವಿ ಮಾಡಿದ್ದಾರೆ. ತುಂಗಾ ಆರತಿ ಈಗಾಗಲೇ ನಡೆಯುತ್ತಿದೆ. ಕಾವೇರಿ ಆರತಿ ನಡೆಸಲು ಸಮಿತಿ ರಚನೆ ಮಾಡಲಾಗಿದೆ. ಅದೇ ರೀತಿ ಕೃಷ್ಣಾ ಆರತಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
ಈ ಅಣೆಕಟ್ಟಿನ ಉದ್ಯಾನವನ ಉತ್ತಮವಾಗಿದೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಏನು ಕೆಲಸ ಮಾಡಬೇಕೋ ಅದನ್ನು ಸರಕಾರ ಮಾಡಲಿದೆ. ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ಭೂಮಿ ಕಳೆದುಕೊಂಡವರು ಹಾಗೂ ಭೂಸ್ವಾಧೀನ ವಿಚಾರವಾಗಿ ಈ ಭಾಗದ ಮೂರು ಜನ ಮಂತ್ರಿಗಳು ಹಾಗೂ ಶಾಸಕರು ಪ್ರಸ್ತಾವನೆ ಮಾಡಿದ್ದಾರೆ. ಎಲ್ಲರ ಬಳಿ ಯಾವ, ಕೆಲಸಗಳನ್ನು ಮಾಡಬಹುದು ಎಂದು ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಭೂಮಿ ಕಳೆದುಕೊಂಡಿರುವ ಸಂತ್ರಸ್ತರ ವಿಚಾರವಾಗಿ ಪ್ರತ್ಯೇಕ ಸಭೆ ಕರೆದು, ಕಾನೂನು ಚೌಕಟ್ಟಿನಲ್ಲಿ ಯಾವ ರೀತಿಯ ಪರಿಹಾರ ನೀಡಬಹುದು ಎಂಬುದರ ಕುರಿತು ತೀರ್ಮಾನ ಮಾಡಲಾಗುವುದು. ಪುನರ್ವಸತಿ ವಿಚಾರವಾಗಿ ಅವಗಾಹನೆ ನಡೆಸಬೇಕಿದೆ. ಈಗಾಗಲೇ ಕಳೆದ ವರ್ಷದ ಎಪ್ರಿಲ್, ನವೆಂಬರ್ ಅಲ್ಲಿ ತಪಾಸಣೆ ನಡೆಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ತಮಿಳುನಾಡಿಗೆ ಹೆಚ್ಚುವರಿ 100 ಟಿಎಂಸಿ ನೀರು ಹರಿದಿದೆ: ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ನಿಗದಿತ ನೀರಿಗಿಂತ 100 ಟಿಎಂಸಿ ಹೆಚ್ಚುವರಿ ನೀರನ್ನು ಹರಿಸಲಾಗಿದೆ. ನಮ್ಮಲ್ಲಿ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಈ ಎಲ್ಲ ಕಾರಣಗಳನ್ನಿಟ್ಟುಕೊಂಡು ಮೇಕೆದಾಟು ಯೋಜನೆ ಅನುಮತಿಗೆ ಮನವಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಕಳೆದ ವರ್ಷ ರಾಜ್ಯದ 220ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೆವು. ಮೋಡಕ್ಕೆ ಯಾವ ಸರಕಾರ ಇದೆ ಎಂದು ಗೊತ್ತಾಗುತ್ತದೆಯೇ? ಮೂರು- ನಾಲ್ಕು ವರ್ಷಗಳಿಗೆ ಒಮ್ಮೆ ಬರಗಾಲ ಬರುವುದು ಪ್ರಕೃತಿ ನಿಯಮ. ರಾಜ್ಯದ ಎಲ್ಲ ಪ್ರಮುಖ ಅಣೆಕಟ್ಟುಗಳು ತುಂಬಿವೆ. ಒಂದಷ್ಟು ಜಿಲ್ಲೆಗಳಲ್ಲಿ ಕೆರೆಗಳು ತುಂಬಿಲ್ಲ ಎಂದು ಶಿವಕುಮಾರ್ ಹೇಳಿದರು.