ಎಲ್ಲರ ಮೇಲೂ ಸದಾ ಆರೋಪ ಮಾಡುವುದೇ ಬಿಜೆಪಿ ಕೆಲಸ : ಡಿಸಿಎಂ ಡಿ.ಕೆ.ಶಿವಕುಮಾರ್
ಕಲಬುರಗಿ: "ಎಲ್ಲರ ಮೇಲೂ ಸದಾ ಆರೋಪ ಮಾಡುವುದೇ ಬಿಜೆಪಿ ಕೆಲಸ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು.
ನಾಗಮಂಗಲ ಗಣಪತಿ ವಿಸರ್ಜನೆ ಗಲಾಟೆಗಳಲ್ಲಿ ಪಿಎಫ್ಐ, ಬಾಂಗ್ಲಾ ವಲಸಿಗರ ಕೈವಾಡವಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, "ಗಣಪತಿ ವಿಸರ್ಜನೆ ವೇಳೆ ಉಂಟಾಗಿರುವ ಗಲಭೆಗಳ ವಿರುದ್ಧ ನಮ್ಮ ಸರಕಾರ ಕೂಡಲೇ ಕ್ರಮ ತೆಗೆದುಕೊಂಡಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಸರಕಾರ ಮಾಡುತ್ತದೆ. ಪೊಲೀಸ್ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾತನಾಡುವವರು ಮಾತನಾಡಲಿ" ಎಂದರು.
ಅಮೆರಿಕ ಪ್ರವಾಸದ ಬಗ್ಗೆ ಕೇಳಿದಾಗ "ಅಮೆರಿಕದ ಚುನಾವಣಾ ಪದ್ಧತಿ, ಅಲ್ಲಿನ ಯುವಕರ ಉತ್ಸಾಹ, ಆಸಕ್ತಿ ಸೇರಿದಂತೆ ಅನೇಕ ವಿಚಾರಗಳನ್ನು ನಾವು ಕಲಿಯಬೇಕಿದೆ. ಅಮೆರಿಕಗೆ ಕುಟುಂಬ ಸಮೇತ ಖಾಸಗಿ ಪ್ರವಾಸಕ್ಕೆ ಹೋಗಿದ್ದೆ" ಎಂದು ಹೇಳಿದರು.
"ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಕಮಲ ಹ್ಯಾರಿಸ್ ಸೇರಿದಂತೆ ನಾನು ಯಾರನ್ನೂ ಭೇಟಿಯಾಗಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನಾನು ಹೋದ ಸಮಯದಲ್ಲೇ ಚುನಾವಣಾ ರ್ಯಾಲಿ ನಡೆಯುತ್ತಿತ್ತು. ಅದು ಹೇಗೆ ನಡೆಯುತ್ತದೆ ಎಂದು ವೀಕ್ಷಿಸಿದೆ" ಎಂದರು.