ದ್ವೇಷ ರಾಜಕಾರಣಕ್ಕೆ ದಾರಿಯಾಗಬಾರದು ಎಂದು ಸಿಬಿಐ ಮುಕ್ತ ತನಿಖೆ ಅಧಿಕಾರ ಹಿಂದಕ್ಕೆ : ಡಿಕೆಶಿ ಸಮರ್ಥನೆ
ಬೆಂಗಳೂರು :“ದ್ವೇಷದ ರಾಜಕಾರಣಕ್ಕೆ ದಾರಿ ಆಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ ನೀಡಿದ್ದ ಮುಕ್ತ ಅನುಮತಿ ಅಧಿಕಾರವನ್ನು ಹಿಂದಕ್ಕೆ ತೆಗದುಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸಿಬಿಐ ಮುಕ್ತ ತನಿಖೆಗೆ ರಾಜ್ಯ ಸರಕಾರ ಕಡಿವಾಣ ಹಾಕಿರುವ ಸಂಬಂಧ ಬಿಜೆಪಿ ಟೀಕೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಗಂಭೀರ ಪ್ರಕರಣಗಳು ಎದುರಾದಾಗ ನಮ್ಮ ಅಧಿಕಾರಿಗಳು ತನಿಖೆಗೆ ಸೂಕ್ತರಲ್ಲ ಎನ್ನುವ ಅಭಿಪ್ರಾಯ ಬಂದರೆ, ಆ ವೇಳೆ ಸಿಬಿಐಗೆ ನೀಡುವ ಬಗ್ಗೆ ಚಿಂತನೆ ಮಾಡುತ್ತೇವೆ” ಎಂದರು.
ʼಕಾಂಗ್ರೆಸ್ ಬ್ಯೂರೋ ಏಜೆನ್ಸಿʼ ಎಂದವರು ಯಾರು? :
“ಸಿಬಿಐ ಬಗ್ಗೆ ಜನತಾದಳದ ದೇವೇಗೌಡರು, ಕುಮಾರಸ್ವಾಮಿ ಏನು ಮಾತನಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಯವರು ಸಿಬಿಐ ಅನ್ನು ʼಕಾಂಗ್ರೆಸ್ ಬ್ಯೂರೋ ಆಫ್ ಏಜೆನ್ಸಿʼ ಎಂದು ಕರೆದಿದ್ದರು. ಸಿಬಿಐಗೆ ಯಾವ, ಯಾವ ಪ್ರಕರಣಗಳನ್ನು ನೀಡಲಾಗಿತ್ತು. ಅವುಗಳು ಏನಾಗಿವೆ, ಐಎಂಎ ಪ್ರಕರಣ ಏನಾಗಿದೆ ಎಂಬುದರ ಬಗ್ಗೆ ನಾನು ಚರ್ಚಿಸುವುದಿಲ್ಲ” ಎಂದು ಹೇಳಿದರು.
ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ನಿರ್ಣಯದ ಬಗ್ಗೆ ಕೇಳಿದಾಗ, “ಅನೇಕ ವಿಚಾರಗಳನ್ನು ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಗಮನಕ್ಕೆ ತರದೇ ತೀರ್ಮಾನ ಮಾಡಲು ಆಗುತ್ತದೆಯೇ? ಆದ ಕಾರಣ ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ತೀರ್ಮಾನ ತಗೆದುಕೊಂಡಿದ್ದೇವೆ" ಎಂದು ತಿಳಿಸಿದರು.
ರಾಜಭವನದ ಆಂತರಿಕ ವಿಚಾರ ನನಗೆ ಗೊತ್ತಿಲ್ಲ :
ರಾಜಭವನದಿಂದ ಮಾಹಿತಿ ಸೋರಿಕೆ ಬಗ್ಗೆ ಬಿಜೆಪಿ ಆರೋಪದ ಮಾಡುತ್ತಿದೆ ಎಂದಾಗ, “ಇದು ರಾಜಭವನದ ಆಂತರಿಕ ವಿಚಾರ. ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಲೋಕಾಯುಕ್ತ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿಯಿಲ್ಲ” ಎಂದರು.