ಮಲ್ಲಿಕಾರ್ಜುನ ಖರ್ಗೆಯವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು : ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ಅಧ್ಯಕ್ಷರು. ನಮ್ಮ ನಾಯಕರು ಅವರನ್ನು ಭೇಟಿ ಮಾಡದೇ ಬೇರೆ ಯಾರನ್ನು ಭೇಟಿ ಮಾಡಬೇಕು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ಹೊಸದಿಲ್ಲಿಯಲ್ಲಿ ಹೈಕಮಾಂಡ್ ಅನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ವದಂತಿ ಮೂಡುತ್ತಿರುವ ಕುರಿತು ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಮ್ಮ ರಾಜ್ಯದವರೇ ಎಐಸಿಸಿ ಅಧ್ಯಕ್ಷರಾಗಿದ್ದು, ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ. ನಾನು ದಿಲ್ಲಿಗೆ ಭೇಟಿ ಕೊಟ್ಟಾಗೆಲ್ಲಾ ನಮ್ಮ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ನಾನು ದಿನ ನಿತ್ಯ ಅವರ ಸಂಪರ್ಕದಲ್ಲಿ ಇರುತ್ತೇನೆ. ಪಕ್ಷದ ಬೆಳವಣಿಗೆಗಳ ವರದಿ ನೀಡುತ್ತಿರುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಸಚಿವರು, ಶಾಸಕರು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸ್ವಾಭಾವಿಕ. ಇದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ನನ್ನನ್ನೂ ನೂರಾರು ಮಂದಿ ಬಂದು ಭೇಟಿ ಮಾಡುತ್ತಾರೆ. ಅದೆಲ್ಲದಕ್ಕೂ ವಿಶೇಷ ಅರ್ಥ ಕಲ್ಪಿಸಲು ಸಾಧ್ಯವೇ? ರಾಜಕೀಯ, ಆಡಳಿತ ಹಾಗೂ ಕೆಲವು ಸನ್ನಿವೇಶಗಳ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದು ಸಹಜ ಎಂದು ಅವರು ತಿಳಿಸಿದರು.
ಲೋಕಸಭಾ ಚುನಾವಣೆ ಸೋಲು ವರದಿ ಸ್ವೀಕಾರ: ಲೋಕಸಭೆ ಚುನಾವಣೆ ಸೋಲು, ಗೆಲುವಿನ ಬಗ್ಗೆ ಪರಾಮರ್ಶೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಿದ್ದೆವು. ವಿ.ಆರ್. ಸುದರ್ಶನ್ ನೇತೃತ್ವದ ಸಮಿತಿ ಹಾಸನ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳ ಪ್ರವಾಸ ಮಾಡಿ ವರದಿ ಸಲ್ಲಿಸಿದೆ. ಈ ವರದಿಯನ್ನು ಅಧ್ಯಯನ ಮಾಡಿ ಹಾಗೂ ರಾಜ್ಯದ ಎಲ್ಲ ವಲಯಗಳ ವರದಿ ಸೇರಿಸಿ, ನಂತರ ಅದನ್ನು ಚರ್ಚಿಸುತ್ತೇವೆ ಎಂದು ಅವರು ತಿಳಿಸಿದರು.
ಪಕ್ಷದ ನೀತಿಯನುಸಾರ ನಡೆಯುತ್ತೇನೆ :
ಜಾತಿ ಗಣತಿ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯವೇ ಬೇರೆ, ಪಕ್ಷದ ಅಧ್ಯಕ್ಷನಾಗಿ ಅಭಿಪ್ರಾಯ ಬೇರೆ. ಪಕ್ಷದ ನೀತಿಯಂತೆ ನಾವು ನಡೆಯಬೇಕು. ಪಕ್ಷದ ನೀತಿಯನ್ನು ನಾನೊಬ್ಬನೆ ತೀರ್ಮಾನಿಸಲು ಆಗುವುದಿಲ್ಲ. ಇಡೀ ಪಕ್ಷ ಹಾಗೂ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ರಾಹುಲ್ ಗಾಂಧಿ ನಮಗೆ ನಿರ್ದಿಷ್ಟ ನಿರ್ದೇಶನ ನೀಡಿದ್ದು, ಪಕ್ಷದ ಪ್ರಣಾಳಿಕೆಯಲ್ಲಿ ಕೆಲವು ವಿಚಾರ ಪ್ರಸ್ತಾಪವಾಗಿವೆ. ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಮಾಡಲಾಗುವುದು.
ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ