ಗುತ್ತಿಗೆದಾರನ ಸಾವಿಗೂ ಪ್ರಿಯಾಂಕ್ ಖರ್ಗೆಗೂ ಸಂಬಂಧವಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು : ನಮ್ಮದು ಸ್ವಚ್ಛ ಆಡಳಿತದ ಸರಕಾರ. ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆಗೂ ಯಾವುದೇ ಸಂಬಂಧವಿಲ್ಲ. ಪ್ರಿಯಾಂಕ್ ಖರ್ಗೆ ಅವರ ಪ್ರಾಮಾಣಿಕತೆ ಬಗ್ಗೆ ನಮಗೆ ಗೊತ್ತಿದೆ. ಗುತ್ತಿಗೆದಾರನ ಸಾವಿನ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿ ಅವರ ವಿರುದ್ಧ ನೇರ ಆರೋಪವಿಲ್ಲ. ಬೇರೆಯವರ ಮೇಲೆ ಆರೋಪ ಮಾಡಿದಾಕ್ಷಣ ಇವರು ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಗುತ್ತಿಗೆದಾರ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತಿರುವ ರಾಜು ಕಾಂಗ್ರೆಸ್ ನಾಯಕರ ಜೊತೆ ಇರುವ ಪೋಟೋಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಡುಗಡೆ ಮಾಡಿರುವ ಕುರಿತು ಹೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಜೊತೆ ವಿಜಯೇಂದ್ರ, ಯಡಿಯೂರಪ್ಪ ಇರುವ ಫೋಟೋಗಳಿವೆ. ನಮ್ಮ ಮನೆಗೆ ಬಂದವರು, ಮದುವೆ ಕಾರ್ಯಕ್ರಮಕ್ಕೆ ಹೋದಾಗ ಅನೇಕರು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ಹೇಳಿದರು.
ವಿಜಯೇಂದ್ರ, ಯಡಿಯೂರಪ್ಪ ಕ್ರಿಮಿನಲ್, ರೌಡಿಗಳು ಸೇರಿದಂತೆ ಯಾರೆಲ್ಲರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ನಾನು ಬಿಡುಗಡೆ ಮಾಡಲೇ? ಅವರಿಗೆ ಬೇಕು ಎಂದರೆ ಬಿಡುಗಡೆ ಮಾಡುತ್ತೇನೆ. ಆರೋಪಿಗಳು ಹಾಗೂ ನಮ್ಮ ಜತೆ ಮಾತುಕತೆ, ವ್ಯವಹಾರ ನಡೆದಿರುವುದಕ್ಕೆ ದಾಖಲೆ ಇದ್ದರೆ ಆರೋಪ ಮಾಡಲಿ. ನಾವು ಉತ್ತಮವಾಗಿ ಸರಕಾರ ನಡೆಸುತ್ತಿದ್ದು, ವಿರೋಧ ಪಕ್ಷದವರು ಸುಮ್ಮನೆ ಮಾತಾಡಬೇಕು ಎಂಬ ಕಾರಣಕ್ಕೆ ಮಾತನಾಡುತ್ತಾರೆ. ಮಾತಾಡಲಿ ಬಿಡಿ ಎಂದು ಅವರು ತಿರುಗೇಟು ನೀಡಿದರು.
ಬಿಜೆಪಿ ಅವಧಿಯಲ್ಲಿ ಯಾಕೆ ಸಿಬಿಐ ತನಿಖೆಗೆ ನೀಡಲಿಲ್ಲ?: ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿ ಮುತ್ತಿಗೆ ಹಾಕುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಮುತ್ತಿಗೆ ಹಾಕಲಿ. ನನ್ನ ಸಹೋದರ ಸುರೇಶ್, ರಾಜರಾಜೇಶ್ವರಿ ನಗರದ ಕೆಲವು ಪ್ರಕರಣಗಳನ್ನು ಪ್ರಸ್ತಾಪಿಸಿದ್ದಾರೆ. ಅವೆಲ್ಲವನ್ನು ಸೇರಿಸಿ ಸಿಬಿಐಗೆ ವಹಿಸೋಣ ಎಂದರು.
ಬಿಜೆಪಿ ಸರಕಾರ ಇದ್ದಾಗ ನನ್ನ ಪ್ರಕರಣವನ್ನು ಮಾತ್ರ ಸಿಬಿಐಗೆ ನೀಡಿದ್ದರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಡಿ.ಕೆ.ರವಿ ಸಾವು, ಸೌಜನ್ಯಾ ಸಾವು, ಪರೇಶ್ ಮೆಸ್ತಾ ಪ್ರಕರಣ ಸೇರಿದಂತೆ ಸುಮಾರು 12 ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದೆವು. ಬಿಜೆಪಿಯವರು ನನ್ನ ಪ್ರಕರಣದ ಜತೆ ಬಿಜೆಪಿ ಸಚಿವರ ಪ್ರಕರಣಗಳನ್ನು ಸಿಬಿಐಗೆ ನೀಡಬೇಕಿತ್ತು. ಯಾಕೆ ನೀಡಲಿಲ್ಲ ಎಂದು ಉಪ ಮುಖ್ಯಮಂತ್ರಿ ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಬಗ್ಗೆ ಬಿಜೆಪಿಗೆ ಅಸೂಯೆ: ಬಿಜೆಪಿಯವರು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ಯಾವ ತಪ್ಪು ಮಾಡಿದ್ದಾರೆ ಎಂದು ರಾಜೀನಾಮೆ ನೀಡಬೇಕು? ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ಧ್ವನಿ. ಅವರ ಮೇಲಿನ ಅಸೂಯೆಗೆ ವಿಪಕ್ಷಗಳು ಈ ರೀತಿ ನಡೆದುಕೊಳ್ಳುತ್ತಿವೆ ಎಂದು ಟೀಕಿಸಿದರು.
ದಲಿತ ಸಮುದಾಯದ ನಾಯಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಐಟಿ-ಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಎಸ್.ಎಂ.ಕೃಷ್ಣ ಅವರ ಸರಕಾರದ ನಂತರ ಐಟಿ-ಬಿಟಿ ಕ್ಷೇತ್ರದಲ್ಲಿ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ. ಹೀಗಾಗಿ ಅವರನ್ನು ಕೆಳಗಿಳಿಸುವ ಸಂಚು ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಗಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ, ಈ ವಿಚಾರವಾಗಿ ಗಮನ ಹರಿಸುತ್ತೇವೆ. ಅನ್ಯಾಯ ಆಗಿರುವವರಿಗೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.