ಶ್ರೀರಾಮುಲು ಅವರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
"ಜನಾರ್ಧನ ರೆಡ್ಡಿ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ"

ಡಿ.ಕೆ.ಶಿವಕುಮಾರ್ | PC :PTI
ಬೆಂಗಳೂರು : “ನನಗೆ ಶ್ರೀರಾಮುಲು ಅವರು ಸಿಕ್ಕಿಲ್ಲ. ನನ್ನ ಬಳಿ ಅವರು ಮಾತನಾಡಿಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ರಾಮುಲು ಅವರನ್ನು ನೀವು ಸಂಪರ್ಕ ಮಾಡಿದ್ದೀರಿ ಎನ್ನುವ ಜನಾರ್ಧನ ರೆಡ್ಡಿ ಅವರ ಆರೋಪದ ಬಗ್ಗೆ ಕೇಳಿದಾಗ, “ಆತ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ. ಆತ ಆ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟ, ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ? ಆತ ನನ್ನ ಹೆಸರು ತೆಗೆದುಕೊಂಡರೆ ದೊಡ್ಡವನಾಗುತ್ತಾನೆಯೇ? ನಾನು ಸಂಪರ್ಕದಲ್ಲಿ ಇರುವುದನ್ನು ಆತ ನೋಡಿದ್ದಾನೆಯೇ? ಆತನೇ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ” ಎಂದರು.
“ಈ ಹಿಂದೆ ಚುನಾವಣೆಗೆ ಮುಂಚಿತವಾಗಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಆಗ ಅವರು ಬರುವುದಿಲ್ಲ, ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು. ನಾನು ಆ ರೀತಿ ಸುಮಾರು 50 ಜನಕ್ಕೆ ಕೇಳಿದ್ದೇನೆ” ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಹಾವಳಿಗಳ ಬಗ್ಗೆ ಕೇಳಿದಾಗ, “ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು, ಕಂದಾಯ, ಗೃಹ, ಕಾನೂನು ಸಚಿವರು ಸೇರಿ ಚರ್ಚೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಾನು ಹಿಂದೆ ಅಧ್ಯಯನ ಮಾಡಿದ್ದೆ. ಕಾನೂನಾತ್ಮಕವಾಗಿ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ನಾವು ಚರ್ಚೆ ಮಾಡುತ್ತೇವೆ. ಸದ್ಯದಲ್ಲಿಯೇ ಸರಕಾದ ನಿರ್ಧಾರ ತಿಳಿಸಲಾಗುವುದು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ” ಎಂದು ಹೇಳಿದರು.