ದಸರಾ ಕ್ರೀಡಾಕೂಟ ಉದ್ಘಾಟಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಮೈಸೂರು,ಅ.11: ನನ್ನ 14 ನೇ ವಯಸ್ಸಿನಲ್ಲಿ ದಸರಾ ಕ್ರೀಡಾಕೂಟದ ಜೂನಿಯರ್ ವಿಭಾಗದ ಜಾವಲಿನ್ ಎಸೆತ ಮತ್ತು 14.5 ಕಿಲೋ ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತು ಮನೆಗೆ ಹೋಗಿದ್ದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಳೆಯ ನೆನಪನ್ನು ಮೆಲುಕು ಹಾಕಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಮೈಸೂರು ದಸರಾ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು "ನೀವು ಕುಳಿತ ಜಾಗದಲ್ಲೇ ನಾನು ಕುಳಿತುಕೊಂಡಿದ್ದೆ. ಗ್ರಾಮೀಣ ಭಾಗದಿಂದ ಬಂದಂತಹ ನೀವೆಲ್ಲಾ ನನ್ನಂತೆ ನಾಯಕರಾಗಿ ಹೊರಹೊಮ್ಮಬೇಕು. ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಆಸ್ತಿಗಳಾಗಿ ಬೆಳಗಬೇಕು ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಹದೇವಪ್ಪ ಅವರ ಮನವಿ ಮೇರೆಗೆ ಬಂದು ಸಂತೋಷದಿಂದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದ್ದೇನೆ. ಕ್ರೀಡಾಕೂಟದ ಉದ್ಘಾಟನೆ ಮಾಡಿದ್ದು ಬಹಳ ಸಂತಸ ನೀಡಿತು ಎಂದು ಹೇಳಿದರು.
ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಗೋವಿಂದರಾಜು ಅವರು, ಕ್ರೀಡಾ ಸಚಿವರಾದ ನಾಗೇಂದ್ರ ಅವರು ಕ್ರೀಡಾಪಟುಗಳಿಗೆ ಉತ್ತಮವಾದ ಸಮವಸ್ತ್ರಗಳನ್ನ ನೀಡಿದ್ದಾರೆ. ನಾವುಗಳು ಒಂದು ಶೂ ತೆಗೆದುಕೊಳ್ಳಲು ಪರದಾಡುವಂತಹ ಸ್ಥಿತಿಯಿತ್ತು. ಇಂದು ನಿಮ್ಮ ಪೋಷಕರು ಬೆಂಬಲ ನೀಡಿದ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಿ, ಅವಕಾಶ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಶ್ರಮ ಪಡದೆ ಯಾವುದೂ ದಕ್ಕುವುದಿಲ್ಲ. ಶ್ರಮ ಇದ್ದ ಕಡೆ ಫಲವಿದೆ. ಗಣಪತಿಯನ್ನು ಪೂಜಿಸಿದ ತಕ್ಷಣ ವಿದ್ಯೆ ಬರುವುದಿಲ್ಲ, ಹಗಲು ಹೊತ್ತು ಶ್ರಮ ಪಡಬೇಕು. ಈಗ ಸ್ಪರ್ದೆ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿದೆ. ನೀವೆಲ್ಲಾ ಗ್ಲೋಬಲ್ ಮಟ್ಟಕ್ಕೆ ಬೆಳೆಯಬೇಕು ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಕ್ರೀಡಾ ಸಚಿವ ಬಿ.ನಾಗೇಂದ್ರ, ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು, ಶಾಸಕರುಗಳಾದ ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.