ಗ್ಯಾರಂಟಿ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಆಲೋಚನೆ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್ (PC:x/@DKShivakumar)
ಬೆಂಗಳೂರು: ಆದಾಯ ಹೆಚ್ಚಾಗಿರುವವರು, ತೆರಿಗೆ ಪಾವತಿದಾರರು ಕೂಡ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ. ಅಂತಹ ಪ್ರಕರಣಗಳ ಪರಿಶೀಲನೆ ಮಾಡಲಾಗುವುದು. ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಆಲೋಚನೆ ನಡೆಸುತ್ತಿದ್ದೇವೆ. ಗ್ಯಾರಂಟಿ ಅನುಷ್ಠಾನ ಸಮಿತಿ ಈ ವಿಚಾರವಾಗಿ ಪರಿಶೀಲನೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಪದ್ಮನಾಭ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು. ಪಕ್ಷದ ಅಧ್ಯಕ್ಷನಾದ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಬದಲಿಸುವ ಅಥವಾ ಕತ್ತರಿ ಹಾಕುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ" ಎಂದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಿದ್ದೇವೆ. ರಾಜ್ಯಮಟ್ಟದಲ್ಲಿ ಎಚ್.ಎಂ.ರೇವಣ್ಣ ಅಧ್ಯಕ್ಷತೆ ಹಾಗೂ ಐವರು ಉಪಾಧ್ಯಕ್ಷರ ಸಮಿತಿ ರಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಸಮಿತಿಗಳಲ್ಲಿ ಅಧ್ಯಕ್ಷರು ಹಾಗೂ 14 ಮಂದಿ ಸದಸ್ಯರ ಸಮಿತಿ ಮಾಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಅಧ್ಯಕ್ಷರು ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾಗಿರುತ್ತಾರೆ. ಅವರು ಕ್ಷೇತ್ರ ಹಾಗೂ ತಾಲೂಕುಗಳಲ್ಲಿ ಹಾಗೂ ವಾರ್ಡ್ ಗಳಲ್ಲಿ ಕಚೇರಿ ನೀಡಲು ಆದೇಶ ನೀಡಿದ್ದೇವೆ. ಜನರಿಗೆ ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ಈ ಐದು ಯೋಜನೆಗಳನ್ನು ಜಾರಿ ಮಾಡಲು ಈ ಸಮಿತಿ ರಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ನಮ್ಮ ಬಜೆಟ್ ನಲ್ಲಿ ಈ ಯೋಜನೆಗಳಿಗೆ 56 ಸಾವಿರ ಕೋಟಿ ರೂ.ಮೀಸಲಿಡಲಾಗಿದ್ದು, ಶಕ್ತಿ ಯೋಜನೆ ನಂತರ ಜನರ ಅನುಕೂಲಕ್ಕೆ ಸಾರಿಗೆ ಇಲಾಖೆ ಸಾವಿರಾರು ಹೊಸ ಬಸ್ ಖರೀದಿ ಮಾಡುತ್ತಿದೆ. ರಾಜ್ಯದಲ್ಲಿ ಬಸ್ ಪ್ರಯಾಣದ ಪ್ರಮಾಣ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ನೀಡುವ ಅನುದಾನ ಕೊರತೆಯಾಗಿದೆ ಎಂದು ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವೂ ಸುಳ್ಳು, ನಮ್ಮ ಸರಕಾರ ಇಂತಹ ದೊಡ್ಡ ಯೋಜನೆ ಜಾರಿ ಮಾಡಿದ್ದಾರೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಅಸೂಯೆಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಯಾವ ಸಚಿವರು ಹೇಳಿಲ್ಲ ಎಂದರು.
ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಮ್ಮ ರಾಜ್ಯದ ಬಜೆಟ್ ಪ್ರಮಾಣ 26 ಸಾವಿರ ಕೋಟಿ ರೂ. ಇತ್ತು. ಈಗ ಅದು 3.71 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವಿದೆ ಎಂದು ಶಿವಕುಮಾರ್ ತಿಳಿಸಿದರು.