ಸಂಘಟನೆ ಬಲವರ್ಧನೆಗೆ ‘ಕಾಂಗ್ರೆಸ್ ಕುಟುಂಬ’ ಕಾರ್ಯಕ್ರಮ : ಡಿಸಿಎಂ ಡಿ.ಕೆ.ಶಿವಕುಮಾರ್
Photo : x/@DKShivakumar
ಬೆಂಗಳೂರು : ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ, ಬಲವರ್ಧನೆಗೆ ‘ಕಾಂಗ್ರೆಸ್ ಕುಟುಂಬ’ ಎಂಬ ಕಾರ್ಯಕ್ರಮ ರೂಪಿಸಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜೂನ್ 1ಕ್ಕೆ ಪಕ್ಷದ ಪದಾಧಿಕಾರಿಗಳ ಸಭೆ ಕರೆದಿದ್ದು, ‘ಕಾಂಗ್ರೆಸ್ ಕುಟುಂಬ’ ಎಂಬ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಪ್ರತಿ ಬೂತ್ನಲ್ಲಿ 50ಸದಸ್ಯರನ್ನು ಸೇರಿಸಬೇಕು. ಆ ಬೂತ್-ಹಳ್ಳಿಗಳಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಆ 50 ಮಂದಿ ಸೇರಿಸಿ ತೀರ್ಮಾನ ಮಾಡಬೇಕು. ಆಮೂಲಕ ಕಾರ್ಯಕರ್ತರ ಪಕ್ಷವಾಗಿ ಮಾಡಬೇಕು. ಯಾರು ಎμÉ್ಟೀ ದೊಡ್ಡ ನಾಯಕರಾಗಿದ್ದರೂ ಅವರು ಈ ಜವಾಬ್ದಾರಿ ತೆಗೆದುಕೊಂಡು ಈ ಕಾಂಗ್ರೆಸ್ ಕುಟುಂಬವನ್ನು ಬೆಳೆಸಲೇಬೇಕು, ಇದಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಸಿಎಂರಿಂದ ಕಾರ್ಯಕರ್ತರ ಭೇಟಿ: ನಾನು ಹಾಗೂ ಸಿಎಂ ಚರ್ಚೆ ಮಾಡಿದ್ದು, ಪ್ರತಿ ತಿಂಗಳು ಒಂದು ದಿನ ಪಕ್ಷದ ಕಚೇರಿಯಲ್ಲಿ ಕೂತು ಕಾರ್ಯಕರ್ತರನ್ನು ಭೇಟಿ ಮಾಡಲಿದ್ದೇವೆ. ಇದನ್ನು ಸರಿಯಾದ ವ್ಯವಸ್ಥೆ ಮೂಲಕ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೇವಲ ಕಾರ್ಯಕರ್ತರು, ಪಕ್ಷದ ಸದಸ್ಯತ್ವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗಿರುತ್ತದೆ. ಇನ್ನು ಮಂತ್ರಿಗಳು ವಾರ ಮುಂಚಿತವಾಗಿ ದಿನಾಂಕ ನಿಗದಿ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಅವರು ತಿಳಿಸಿದರು.
ಎಷ್ಟೋ ಬಾರಿ ಕಾರ್ಯಕರ್ತರು ನಮ್ಮನ್ನು ಭೇಟಿ ಮಾಡಲು ದೂರದ ಊರುಗಳಿಂದ ಬರುತ್ತಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಪ್ರಮುಖರನ್ನೇ ಮೊದಲು ಕರೆದು ಮಾತನಾಡಿಸುತ್ತೇವೆ. ಇದರಿಂದ ನಮಗೂ ಮುಜುಗರವಾಗುತ್ತದೆ. ನಮ್ಮನ್ನು ವಿಧಾನಸೌಧದಲ್ಲಿ ಕೂರಿಸಿದವರ ಜತೆ ನಮಗೆ ಮಾತನಾಡಲು ಆಗುವುದಿಲ್ಲ. ಈ ಅನುಭವ ನನಗೂ ಆಗಿದೆ. ಹೀಗಾಗಿ ಈ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದರು.
10 ವರ್ಷದ ಸರಕಾರ: ಈ ಸರಕಾರ ನಾಲ್ಕು ವರ್ಷದ ಸರಕಾರ ಅಲ್ಲ, ಬದಲಿಗೆ 10 ವರ್ಷದ ಸರಕಾರ. ಇದಕ್ಕಾಗಿ ನಾವು ಈಗಿನಿಂದಲೂ ತಯಾರಿ ನಡೆಸಬೇಕು. ನಾನು ಈಗಾಗಲೇ ಸಚಿವರಾದ ರಾಮಲಿಂಗರೆಡ್ಡಿ, ಕೃಷ್ಣ ಭೈರೇಗೌಡ ಜತೆ ಚರ್ಚೆ ಮಾಡಿದ್ದೇನೆ. ನಾವು ಕಾಂಗ್ರೆಸ್ ಕಚೇರಿಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯದ ಎಲ್ಲ ಜಿಲ್ಲಾ ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಮುಂದಿನ ವರ್ಷದಲ್ಲಿ ಅಡಿಪಾಯ ಹಾಕುತ್ತೇವೆ. ಇನ್ನು ರೇಸ್ಕೋರ್ಸ್ ರಸ್ತೆಯ ಕಚೇರಿಯ ಕಟ್ಟಡ ಹೊಡೆದು ಹಾಕಿ ಹೊಸದಾಗಿ ನಿರ್ಮಾಣ ಮಾಡುತ್ತೇವೆ’ ಎಂದು ಅವರು ತಿಳಿಸಿದರು.
ಎಲ್ಲರೂ ಒಟ್ಟಾಗಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಎದುರಿಸಬೇಕು. ನಮ್ಮ ಪಕ್ಷ ಆರಕ್ಕೆ ಆರು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಆ ಮೂಲಕ ಮೇಲ್ಮನೆಯಲ್ಲಿ ನಮಗೆ ಬಹುಮತ ಸಿಗಬೇಕು. ಆಗ ಮಾತ್ರ ವಿಧೇಯಕಗಳು ಅಂಗೀಕರಿಸಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ನೆಹರೂ ಪಕ್ಷದ ಶಕ್ತಿ: ನೆಹರೂ ಅವರ ಹೆಸರೇ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರಿಗೆ ಒಂದು ಸ್ಫೂರ್ತಿ. ಈ ದೇಶದಲ್ಲಿ ಸಂವಿಧಾನದ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದು ಇದಕ್ಕೆ ಭದ್ರ ಅಡಿಪಾಯ ಹಾಕಿದ್ದು ನೆಹರೂ ಅವರು. ಈ ಇತಿಹಾಸ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ನಾಯಕರು ಇತಿಹಾಸ ತಿರುಚಲು, ಅವರ ಹೆಸರನ್ನು ಇತಿಹಾಸ ಪುಟಗಳಿಂದ ತೆಗೆಯಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಅವರು ಇನ್ನು 2-3 ಜನ್ಮ ಎತ್ತಿ ಬಂದರೂ ನೆಹರೂ ಅವರ ಸಾಧನೆ ತೆಗೆದುಹಾಕಲು ಸಾಧ್ಯವಿಲ್ಲ.