ಚನ್ನಪಟ್ಟಣ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್ (PC:x/@DKShivakumar)
ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಗುರುವಾರ ನೆಲಮಂಗಲದ ವೀರಭದ್ರೇಶ್ವರ ದೇವಾಲಯದ ಬಳಿ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಈ ಹಿಂದೆ ಚನ್ನಪಟ್ಟಣದಲ್ಲಿ ಸ್ಥಳೀಯ ಶಾಸಕರು ಧ್ವಜಾರೋಹಣ ನೆರವೇರಿಸದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಳೆದ ಐದು ವರ್ಷಗಳಿಂದ ರಾಮನಗರದಲ್ಲಿ ಧ್ವಜಾರೋಹಣ ಮಾಡಿದ್ದೇನೆ. ಚನ್ನಪಟ್ಟಣದ ಬಗ್ಗೆ ಅಧಿಕಾರಿಗಳ ಬಳಿ ಕೇಳಿದಾಗ ಆರು ವರ್ಷಗಳಿಂದ ಯಾರು ಬಂದು ಧ್ವಜಾರೋಹಣ ನಡೆಸಿಲ್ಲ ಎಂದರು. ಅವರಿಗೆ ದೇಶದ ಮೇಲೆ ವಿಶ್ವಾಸವಿಲ್ಲ ಎಂದೆನಿಸುತ್ತದೆ. ಅವರು ಏನಾದರು ಮಾಡಿಕೊಳ್ಳಲಿ, ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಬಗ್ಗೆ ಒಂದಷ್ಟು ಸಚಿವರು ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ, ಗ್ಯಾರಂಟಿ ನಿಲ್ಲಿಸುವ ಬಗ್ಗೆ ಯಾವ ಸಚಿವರು ಮಾತನಾಡುತ್ತಿಲ್ಲ. ಆದರೆ ಅನುಕೂಲ ಇರುವವರು ಬೇಡ ಎಂದು ಹೇಳುತ್ತಿದ್ದಾರೆ. ಅವರಿಗೂ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಬಗ್ಗೆ ಅಭಿಪ್ರಾಯ ಬರುತ್ತಿದೆ. ಇದರ ಬಗ್ಗೆ ಆನಂತರ ಯೋಚನೆ ಮಾಡುತ್ತೇವೆ. ಗ್ಯಾರಂಟಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.