ರೈತರಿಗೆ ಪರಿಹಾರ ಕೈಸೇರದೆ ಇದ್ದರೆ ಡಿಸಿಗಳೇ ಹೊಣೆ: ಸಚಿವ ಕೃಷ್ಣಭೈರೇಗೌಡ
ಬೆಂಗಳೂರು: ಬರ ಪರಿಹಾರ ನೀಡಲು ರಾಜ್ಯ ಸರಕಾರದ ಖಜಾನೆಯಲ್ಲಿ ಹಣವಿದೆ.ಆದರೂ, ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರದ ಹಣ ಸಿಗದಿದ್ದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಮಾಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿಡಿಯೋ ಸಂವಾದ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಅವರು, ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸುವಂತೆ ಕಳೆದ ಎರಡು ತಿಂಗಳಿನಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರಂತರವಾಗಿ ಸೂಚಿಸಲಾಗುತ್ತಿದೆ. ಆದರೂ, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ಮಾಹಿತಿ ಶೇ.70ನ್ನೂ ಮೀರಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರಿಗೆ ಅನ್ಯಾಯವಾಗಲಿದೆ ಎಂದು ಅಸಮಾಧಾನ ಹೊರಹಾಕಿದರು.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ಸಾಧನೆ ತೀರಾ ಕಳಪೆಯಾಗಿದೆ. ಬರ ಪರಿಹಾರ ಹಣವನ್ನು ನೀಡಲು ರಾಜ್ಯ ಸರಕಾರ ಸಿದ್ದವಾಗಿದೆ. ಖಜಾನೆಯಲ್ಲಿ ಹಣವೂ ಇದೆ. ಆದರೆ, ಪರಿಹಾರ ಫ್ರೂಟ್ಸ್ ದತ್ತಾಂಶವನ್ನು ಆಧರಿಸಿರುವ ಕಾರಣ ಜಿಲ್ಲಾಧಿಕಾರಿಗಳು ಮಾಡುವ ಸಣ್ಣ ತಪ್ಪೂ ಸಹ ರೈತರ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಇನ್ನಾದರೂ ಆಂದೋಲನ ಮಾದರಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸೂಚನೆ ನೀಡಿದರು.
ಶೀಘ್ರದಲ್ಲಿ ತಾಲೂಕು ಹೋಬಳಿ ಸಭೆ ನಡೆಸಿ ಎಲ್ಲಾ ಅಧಿಕಾರಿಗಳನ್ನು ಸ್ಥಳ ವೀಕ್ಷಣೆಗೆ ಕಳುಹಿಸಿ ಡಿ.22ರ ಒಳಗಾಗಿ ರೈತರ ಜಮೀನಿನ ಸಂಪೂರ್ಣ ಮಾಹಿತಿಯನ್ನು ನಮೂದಿಸಿ ಎಂದ ಅವರು, ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಜಿಲ್ಲೆಗಳಲ್ಲಿ ಅಧಿಕಾರಿಗಳು ಈಗಾಗಲೂ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿದ್ದಾರೆ. ಟ್ಯಾಂಕರ್ ಗಳಿಗೆ ಟೆಂಡರ್ ಅನ್ನೂ ಸಹ ಕರೆಯಲಾಗಿದೆ. ಇದು ನಿಜಕ್ಕೂ ಉತ್ತಮವಾದ ಕೆಲಸ ಎಂದು ನುಡಿದರು.
ಹಕ್ಕುಪತ್ರ ನೀಡಿ: ಸಭೆಯಲ್ಲಿ ಅರ್ಹ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಕುರಿತೂ ಚರ್ಚೆ ನಡೆಸಲಾಯಿತು. ಬಡವರಿಗೆ ಸಹಾಯಮಾಡುವ ನಿಟ್ಟಿನಲ್ಲಿ ಅರ್ಹ ಕಂದಾಯ ಗ್ರಾಮಗಳನ್ನು ಶೀಘ್ರ ಘೋಷಿಸಿ ಹಕ್ಕುಪತ್ರ ವಿತರಿಸಿ ಎಂದು ತಾಕೀತು ಮಾಡಿದರು.