ನಿಜಗುಣಾನಂದ ಸ್ವಾಮೀಜಿ ಅವರಿಗೆ ಕೊಲೆ ಬೆದರಿಕೆ ಪತ್ರ
ನಿಜಗುಣಾನಂದ ಸ್ವಾಮೀಜಿ
ಬೆಳಗಾವಿ, ಸೆ. 10: ಬಸವ ತತ್ವ ಪ್ರಚಾರಕರು ಮತ್ತು ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮಿಕನಿಂದ ಕೊಲೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ವರದಿಯಾಗಿದೆ.
ಆ.8ರಂದು ಕೊಲೆ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬೆದರಿಕೆ ಪತ್ರದಲ್ಲಿ ‘2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ, ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನ ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ. ಇನ್ನು ದಿನಗಳನ್ನು ಎಣಿಸು’ ಎಂದು ಪೆÇೀಸ್ಟ್ ಮೂಲಕ ಮಠಕ್ಕೆ ಬಂದ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಈ ಬಗ್ಗೆ ಬೈಲೂರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಈ ಹಿಂದೆಯೂ ಕಲ್ಯಾಣ ಕ್ರಾಂತಿ ಸಮಯದಲ್ಲಿ ಬಸವಣ್ಣನಿಗೆ ಹೀಗೆ ಕಿರುಕುಳ ನೀಡಲಾಗಿತ್ತು. ಮೂಢನಂಬಿಕೆ, ವೈಚಾರಿಕತೆ ಬಗ್ಗೆ ಮಾತನಾಡುವ ನಿಜಗುಣಾನಂದ ಸ್ವಾಮೀಜಿಗೂ ಬೆದರಿಕೆ ಬರುತ್ತಿವೆ. ನಾನು ಕೂಡ ಮುಖ್ಯಮಂತ್ರಿ, ಗೃಹಸಚಿವರ ಜೊತೆಗೆ ಮಾತನಾಡುತ್ತೇನೆ. ಆರೋಪಿಗಳ ಬಂಧನ ಜೊತೆಗೆ ಸ್ವಾಮೀಜಿ ಭದ್ರತೆ ಒದಗಿಸುವಂತೆ ಕೋರುತ್ತೇನೆ ಎಂದರು.
ಬಸವಣ್ಣನವರ ರೀತಿಯಲ್ಲಿ ನಿಜಗುಣಾನಂದ ಸ್ವಾಮೀಜಿ ಕೆಲಸ ಮಾಡುತ್ತಿದ್ದಾರೆ. ಬಸವ ತತ್ವ ಪ್ರಚಾರ ಮಾಡುತ್ತಾರೆ. ವಸ್ತು ಸ್ಥಿತಿ ಹೇಳುತ್ತಾರೆ. ಹೀಗಾಗಿ ಬೆದರಿಕೆ ಬರುವಂತಹದ್ದು. ಆದರೆ, ಹೆದರುವ ಅವಶ್ಯಕತೆ ಇಲ್ಲಾ, ಏನೂ ಆಗುವುದಿಲ್ಲ. ಈ ರೀತಿ ಬೆದರಿಕೆ ಹಾಕುವವರಿಗೆ ಸರಕಾರ ಕ್ರಮ ಕೈಗೊಳ್ಳಬೇಕು. ಸ್ವಾಮೀಜಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು ಎಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದರು.
ಈ ಬಗ್ಗೆ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಕಳೆದ 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ. ಒಂದೇ ತರಹ ಬರಹದ ಪತ್ರಗಳು ಬೇರೆ ಬೇರೆ ಭಾಗಗಳಿಂದ ಬರುತ್ತಿವೆ. ಈಗಾಗಲೇ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಐದು ವರ್ಷಗಳಿಂದ ಸತತವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿವೆ. ಪತ್ರ ಬರೆಯುವವರ ಹಾಗೂ ನನ್ನ ಮಧ್ಯೆ ಯಾವುದೇ ದ್ವೇಷ ಇಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಇಂತಹ ಕೊಲೆ ಬೆದರಿಕೆ ಪತ್ರಗಳನ್ನು ನಾನು ಪ್ರೇಮಪತ್ರಗಳೆಂದು ಭಾವಿಸಿದ್ದೇನೆ. ನನಗೆ ಸಾವಿನ ಬಗ್ಗೆ ಭಯವಿಲ್ಲ, ಸೇವೆ ಮಾಡುವುದು ನಿಲ್ಲುತ್ತದೆ ಎನ್ನುವ ಕೊರಗಷ್ಟೇ. ನಾನು ಸಮಾಜದ ಮಗ. ಈ ರೀತಿಯ ಪತ್ರಗಳಿಂದ ಭಕ್ತರಲ್ಲಿ ಆತಂಕ ಸಹಜ. ಸರಕಾರ ಹಾಗೂ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.