ಫ್ರೂಟ್ಸ್ ತಂತ್ರಾಶದಲ್ಲಿ ರೈತರ ಸಂಪೂರ್ಣ ಮಾಹಿತಿ ನವೀಕರಣಕ್ಕೆ ಡಿ.31ರ ಗಡುವು: ಸಚಿವ ಕೃಷ್ಣ ಬೈರೇಗೌಡ
ವಿಜಯನಗರ: ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ಮತ್ತು ಜಮೀನಿನ ಮಾಹಿತಿ ನವೀಕರಣಗೊಳಿಸಲು ಡಿ.31ರ ವರೆಗೆ ಗಡುವು ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಂಗಳವಾರ ವಿಜಯನಗರ ಜಿಲ್ಲಾಡಳಿತ ಭವನದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬರ ಪರಿಹಾರದ ಹಣ ರೈತರಿಗೆ ಆನ್‍ಲೈನ್ ಮೂಲಕವೇ ತಲುಪಲಿದೆ. ‘ಫ್ರೂಟ್ಸ್’ ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲಿದೆ ಎಂದರು.
ಆದರೆ, ವಿಜಯನಗರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರೂ ಎಲ್ಲ ರೈತರ ಜಮೀನಿನ ಒಟ್ಟು ವಿಸ್ತೀರ್ಣ ಹಾಗೂ ಬೆಳೆ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ಶೇ.77ರಷ್ಟು ಮಾತ್ರ ನಮೂದಿಸಲಾಗಿದೆ. ಈ ಕೆಲಸ ಮುಗಿಯುವವರೆಗೆ ರೈತರಿಗೆ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.
ರೈತರಿಗೆ ಮೊದಲ ಕಂತಿನ ಹಣ ನೀಡಲು ಸರಕಾರದ ಬಳಿ ಹಣ ಇದೆ. ಆದರೂ ಫ್ರೂಟ್ಸ್ ತಂತ್ರಾಂಶದಲ್ಲಿ ನವೀಕರಣಗೊಳ್ಳದೆ ರೈತರಿಗೆ ಹಣ ಬಿಡುಗಡೆ ಸಾಧ್ಯವಿಲ್ಲ. ಹೀಗಾಗಿ ಡಿ.31 ರ ಒಳಗಾಗಿ ಫ್ರೂಟ್ಸ್ ನಲ್ಲಿ ರೈತರ ಜಮೀನಿನ ಮಾಹಿತಿ ನಮೂದಿಸಿ. ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ, ಎಷ್ಟು ಏಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೆ ಇರುತ್ತದೆ. ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಿ ಎಂದು ಅವರು ಸೂಚಿಸಿದರು.
ಪಹಣಿ ಜೊತೆಗೆ ಆಧಾರ್ ಲಿಂಕ್: ರಾಜ್ಯದಲ್ಲಿ ಶೇ.70ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರಕಾರದ ಹಳೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ. ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡಿದರೆ ಸಣ್ಣ ರೈತರ ಅಂಕಿಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೆ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.
ಕುಡಿಯುವ ನೀರು-ಮೇವಿನ ಬಗ್ಗೆ ಎಚ್ಚೆತ್ತುಕೊಳ್ಳಿ: ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು, ಮುಂಜಾಗ್ರತಾ ಕ್ರಮವಾಗಿ ಈಗಲೇ ಜಿಲ್ಲೆಯಲ್ಲಿ 272 ಟ್ಯಾಂಕರ್ ಗಳಿಗೆ ಟೆಂಡರ್ ನೀಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಕೃಷ್ಣ ಬೈರೇಗೌಡ ಪ್ರಶಂಸಿಸಿದರು.
ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಒಂದೇ ಪರಿಹಾರವಲ್ಲ. ಬದಲಿಗೆ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ಎಲ್ಲೇ ಕಂಡು ಬಂದರೂ 24 ಗಂಟೆಯ ಒಳಗಾಗಿ ನೀರು ಪೂರೈಸುವಂತಿರಬೇಕು. 15 ದಿನಗಳಲ್ಲಿ ಬಿಲ್ ಗೆ ಹಣ ಪಾವತಿ ಮಾಡಬೇಕು. ಮೇವಿನ ವಿಚಾರದಲ್ಲೂ ಮುಂಜಾಗ್ರತಾ ತಯಾರಿ ಮಾಡಿಕೊಳ್ಳಬೇಕು. ರಾಜ್ಯದ ಮೇವನ್ನು ಪಕ್ಕದ ರಾಜ್ಯಗಳಿಗೆ ಕಳ್ಳಸಾಗಾಣೆ ಮಾಡುವುದನ್ನು ನಿರ್ಸಿಬಂಧಿಸಿ ಎಂದು ಅವರು ತಿಳಿಸಿದರು.
ನರೇಗಾದಲ್ಲಿ ಮಾನವ ದಿನ ಹೆಚ್ಚಿಸಲು ಮನವಿ: ನರೇಗಾ ಯೋಜನೆಯ ಅಡಿಯಲ್ಲಿ ಮಾನವ ದಿನ ಹೆಚ್ಚಿಸುವಂತೆ ಕೇಂದ್ರ ಸರಕಾರದ ಎದುರು ಮತ್ತೊಮ್ಮೆ ಮನವಿ ಮಾಡಲಾಗುವುದು. ವಿಜಯನಗರ ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ವು ಜನರ ನರೇಗಾ ಮಾನವ ದಿನ ಈಗಾಗಲೇ ಮುಗಿದಿದ್ದು, ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಬಗರ್ ಹುಕುಂ ಅರ್ಜಿಗಳು: ನಮೂನೆ 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ವಿಜಯನಗರ ಜಿಲ್ಲೆಯಲ್ಲಿ 26,365 ಅರ್ಜಿಗಳು ಸಲ್ಲಿಕೆಯಾಗಿವೆ. ನಿಜವಾದ ಸಾಗುವಳಿದಾರರಿಗೆ ಭೂಮಿ ನೀಡುವ ಸಲುವಾಗಿ ಅಧಿಕಾರಿಗಳು ಅರ್ಜಿದಾರರ ನಿರ್ದಿಷ್ಟ ಪ್ರದೇಶಕ್ಕೆ ತೆರಳಿ ಬಗರ್ ಹುಕುಂ ಆ್ಯಪ್ ಮೂಲಕ ‘ಜಿಯೋ ಫೆನ್ಸಿಂಗ್’ ಮಾಡಬೇಕು ಎಂದು ಅವರು ಹೇಳಿದರು.