ʼಕರ್ನಾಟಕ ಬಂದ್ʼ ಬಗ್ಗೆ ಸೆ.25 ರಂದು ತೀರ್ಮಾನ: ವಾಟಾಳ್ ನಾಗರಾಜ್

ಬೆಂಗಳೂರು, ಸೆ.23: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಸೋಮವಾರ ನಡೆಯುತ್ತಿರುವ ಬೆಂಗಳೂರು ಬಂದ್‍ಗೆ ನನ್ನ ಬೆಂಬಲವಿದ್ದು, ಅದೇ ದಿನ ಕರ್ನಾಟಕ ಬಂದ್ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನದಿ, ಗಡಿ ಸೆರಿ ಹಲವು ವಿಚಾರಗಳಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇಂದು ಗಂಭೀರವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸರಕಾರ ನೀರು ಬಿಡಲು ಸಿದ್ದವಾಗಿದ್ದೇವೆ ಎಂದು ಹೇಳುತ್ತಿದೆ. ಯಾರನ್ನು ಕೇಳಿ ಈ ನಿರ್ಧಾರ ಮಾಡಿದೆ ಎಂದು ಪ್ರಶ್ನಿಸಿದರು.
ಕೋರ್ಟ್ ಹೇಳಿರೋದು ನಿಮ್ಮ ತಂಟೆಗೆ ಬರಲ್ಲ, ಪ್ರಾಧಿಕಾರಕ್ಕೆ ಹೋಗಿ ಎಂದು ಹೇಳಿದೆ. ಈಗ ಸರಕಾರ ಯಾರ ಮಾತನ್ನೂ ಕೇಳದೆ ನೀರು ಬಿಡುತ್ತಿದೆ. ನೀವೆ ತೀರ್ಮಾನ ತೆಗೆದುಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ಪ್ರಧಾನಿ ಮನೆಯ ಮುಂದೆ ಕುಳಿತು ಮನವರಿಕೆ ಮಾಡಿಕೊಡಬೇಕಿತ್ತು. ಪ್ರಾಮಾಣಿಕ ಚಿಂತನೆ ಮಾಡಿ ಒಂದು ಹಂತಕ್ಕೆ ಬರಬೇಕಿತ್ತು ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಮೇಲೆ ಒತ್ತಡ ತರದೇ ಯಡಿಯೂರಪ್ಪ, ಬೊಮ್ಮಾಯಿ ಮೈಸೂರು ಬ್ಯಾಂಕ್ ಸರ್ಕಲ್ ಪ್ರತಿಭಟನೆ ಯಾಕೆ ಮಾಡುತ್ತಿದ್ದಾರೆ. ಮೋದಿ ಮತ್ತು ಅಮಿತ್ ಷಾ ಅವರ ಮೇಲೆ ಅವರು ಒತ್ತಡ ಹಾಕಿಲ್ಲ ಎಂದ ಅವರು, ಒಂದು ವೇಳೆ ಬಿಜೆಪಿ ನಾಯಕರು ಒತ್ತಡ ಹಾಕದಿದ್ದಲ್ಲಿ. ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ನಾವು ಹೋರಾಟ ಮಾಡುತ್ತೇವೆ. ಇನ್ನು ಜೆಡಿಎಸ್‍ನವರು ಶುಕ್ರವಾರದಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಆದರೆ ನೀರಿನ ಬಗ್ಗೆ ಮಾತಾಡಿಲ್ಲ ಎಂದು ಹೇಳಿದರು.
ಕಾವೇರಿ ನದಿ ನೀರಿನ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಶಾಸಕ ಸಭೆ ಕರೆದು ಸರ್ವಾನುಮತದಿಂದ ತೀರ್ಮಾನ ಮಾಡಬೇಕು. ನೀರು ಬಿಡಲು ಸಾಧ್ಯವಿಲ್ಲ ಎಂದು ಶಾಸನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಅದರ ಮೇಲೂ ನೀರು ನೀಡಬೇಕು ಎನ್ನುವ ಪರಿಸ್ಥಿತಿ ಬಂದರೆ ಅಧಿಕಾರ ಬಿಟ್ಟು, ಕೂಡಲೇ ರಾಜನಾಮೆ ನೀಡಬೇಕು ಎಂದು ಅವರು ಹೇಳಿದರು.
ಸೋಮವಾರದವರೆಗೆ ಸಿಎಂಗಳ ಸಭೆ ಕರೆದು, ತೀರ್ಮಾನ ತೆಗೆದುಕೊಳ್ಳವ ಸಮಯಾವಕಾಶ ನೀಡುತ್ತಿದ್ದೇವೆ. ತೀರ್ಮಾನಕ್ಕೆ ಬರದಿದ್ದರೆ ಸೋಮವಾರ ಸಭೆ ಮಾಡಿ ಕರ್ನಾಟಕ ಬಂದ್ ಬಗ್ಗೆ ತೀರ್ಮಾನ ಮಾಡುತ್ತೇವೆ. ಅಖಂಡ ಕರ್ನಾಟಕದ ಹೋರಾಟ ಈಗ ಅನಿವಾರ್ಯವಾಗಿದ್ದು, ಎಲ್ಲ ಸಂಘಟನೆಗಳು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಅಖಂಡ ಕರ್ನಾಟಕ ಬಂದ್ ದಿನಾಂಕ: ಸೋಮವಾರ ವುಡ್ ಲ್ಯಾಂಡ್ಸ್ ಹೋಟೆಲ್‍ನಲ್ಲಿ ಎಲ್ಲ ಕನ್ನಡಪರ ಹೋರಾಟಗಾರರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಖಂಡ ಕರ್ನಾಟಕ ಬಂದ್ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.