ನ್ಯಾಯಾಂಗ ನಿಂದನೆಯಿಂದ ಪಾರಾಗಲು ಸೆ.27ರ ವರೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸರಕಾರ ನಿರ್ಧಾರ
ಬೆಂಗಳೂರು, ಸೆ.22: ನ್ಯಾಯಾಂಗ ನಿಂದನೆಯಿಂದ ಪಾರಾಗಲು ಸೆ.27ರ ವರೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸುಪ್ರೀಂ ಕೋರ್ಟ್‍ನಲ್ಲಿ ನಿನ್ನೆ ನಡೆದ ವಿಚಾರಣೆ ವೇಳೆ ತಮಿಳುನಾಡಿಗೆ ನಿಗದಿತ 177 ಟಿಎಂಸಿ ನೀರು ನಿಮಗೆ ಸಿಗಲಿದೆ, ಹೀಗಿರುವಾಗ ಕರ್ನಾಟಕದವರು ಎಷ್ಟಾದರೂ ಆಣೆಕಟ್ಟೆ ಕಟ್ಟಿಕೊಳ್ಳಲಿ ಬಿಡಿ ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂದರು.
ನೀವೇಕೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದೀರಿ? ಈ ವಿಚಾರವಾಗಿ ಕೆಳಹಂತದಲ್ಲೇ ತೀರ್ಮಾನ ಮಾಡಿ ಎಂದು ನ್ಯಾಯಾಲಯ ತಿಳಿಸಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಡಿಪಿಆರ್ ಸೇರಿದಂತೆ ಅಗತ್ಯ ಇಲಾಖೆಗಳ ಅನುಮತಿಯನ್ನು ಕೇಂದ್ರ ಸರಕಾರದಿಂದ ಪಡೆಯಲ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು 24 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆಗ್ರಹ ಮಾಡಿತ್ತು. ನಮ್ಮ ಅಧಿಕಾರಿಗಳು ತಾಂತ್ರಿಕ ಸಮಿತಿ ಮುಂದೆ, ನಾವು ಕೇವಲ 3 ಸಾವಿರ ಕ್ಯೂಸೆಕ್ ನೀರು ಬಿಡಲಷ್ಟೇ ಶಕ್ತವಾಗಿದ್ದೇವೆ ಎಂದು ಸಮರ್ಥವಾಗಿ ವಾದ ಮಂಡಿಸಿದರು. ಇದರ ಪರಿಣಾಮವಾಗಿ 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಮೊದಲು ಆದೇಶ ನೀಡಿತು. ನಂತರ 5 ಸಾವಿರ ಕ್ಯೂಸೆಕ್ ಗೆ ಇಳಿಕೆಯಾಗಿದೆ. ಎಂದು ಶಿವಕುಮಾರ್ ತಿಳಿಸಿದರು.
ಮಂಡ್ಯ ಹಾಗೂ ಇತರೆ ಭಾಗದ ರೈತರ ಬೆಳೆ ಉಳಿಸುವ ಉದ್ದೇಶದಿಂದ ಜಮೀನಿಗೆ ನೀರು ಹರಿಸಿ ಅವರ ರಕ್ಷಣೆ ಮಾಡಿದ್ದೇವೆ.
ʼʼಸೆ.27ರವೆರೆಗೆ ನೀರು ಹರಿಸುವ ಪರಿಸ್ಥಿತಿʼʼ
ಈ ತಿಂಗಳು 26 ಅಥವಾ 27 ರವರೆಗೂ ನೀರು ಹರಿಸುವ ಪರಿಸ್ಥಿತಿ ಬಂದಿದೆ. ಈಗಾಗಲೆ 3 ರಿಂದ 3500 ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿದೆ. ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ನಮ್ಮ ಸರಕಾರ ರಾಜ್ಯದ ಜನರು ಹಾಗೂ ರೈತರ ರಕ್ಷಣೆಗೆ ಬದ್ಧವಾಗಿದ್ದು, ನಮ್ಮ ಕಾನೂನು ತಜ್ಞರ ವಾದ ನಮಗೆ ತೃಪ್ತಿ ಇದೆ ಎಂದು ಅವರ ಹೇಳಿದರು.
ಕೇಂದ್ರ ಸರಕಾರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ನ್ಯಾಯಾಲಯವು ಈ ವಿಚಾರವನ್ನು ಬಗೆಹರಿಸಿಕೊಳ್ಳುವಂತೆ ಹೇಳಿದೆ. ಆದುದರಿಂದ, ಪ್ರಧಾನಿ ಮಧ್ಯಪ್ರವೇಶಿಸಿ ಎರಡು ರಾಜ್ಯದವರನ್ನು ಕರೆಸಿ ಮಾತನಾಡಬೇಕು ಎಂದು ಶಿವಕುಮಾರ್ ತಿಳಿಸಿದರು.
ʼಸಂಕಷ್ಟದ ಪರಿಸ್ಥಿತಿಯಲ್ಲಿ ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೆ ಪರಿಹಾರವಾಗಿದೆ. ನ್ಯಾಯಾಲಯ ಈ ವಿಚಾರವಾಗಿ ಕೆಳಹಂತದಲ್ಲೆ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದು, ಈಗ ಕೇಂದ್ರ ಸರಕಾರ ಮೇಕೆದಾಟು ಯೋಜನೆಗೆ ಅಗತ್ಯ ಎಲ್ಲ ಇಲಾಖೆಗಳ ಅನುಮತಿ ನೀಡಲಿʼ ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.