ಬಸವಣ್ಣ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಘೋಷಣೆ: ಸಿಎಂ ಸಿದ್ದರಾಮಯ್ಯರಿಗೆ ಧನ್ಯವಾದ ತಿಳಿಸಿದ ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’
ಬೆಂಗಳೂರು: ಮಾನವತಾವಾದಿ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ರೆಂದು ಘೋಷಿಸಿದ ತಮ್ಮ ಸರಕಾರ, ಬಸವಾದಿ ಶರಣರ ಸಮಸಮಾಜ ನಿರ್ಮಾಣದ ದಿಶೆಯಲ್ಲಿ ನುಡಿದಂತೆ ನಡೆಯುತ್ತಿದೆ. ತಾವು ಶರಣರ ಚಿಂತನೆಗಳನ್ನು ಅರ್ಥೈಸಿಕೊಂಡು ನಿಜಾರ್ಥದಲ್ಲಿ ಬಸವಾಯತರು ಆಗಿದ್ದೀರಿ. ಅದಕ್ಕಾಗಿ ತಮಗೂ ಹಾಗೂ ಸಂಪುಟದ ಎಲ್ಲ ಸದಸ್ಯರಿಗೂ ಧನ್ಯವಾದಗಳು’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತಿಳಿಸಿದೆ.
ಶನಿವಾರ ಈ ಸಂಬಂಧ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ಪ್ರಕಟಣೆ ನೀಡಿದ್ದು, ‘ಬಸವಣ್ಣನವರು ಜಗತ್ತಿಗೆ ಬೆಳಕಾಗಿರುವ ಕನ್ನಡದ ಕುಲಗುರು. ಕನ್ನಡ ನಾಡು-ನುಡಿ, ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ ವಚನ ಚಳುವಳಿಯ ನಾಯಕರು, ಜನಭಾಷೆಯೆ ದೇವಭಾಷೆಯನ್ನಾಗಿ ಮಾಡಿದ ಮಹಾನ್ ಕನ್ನಡಿಗರು. ದಕ್ಷಿಣ ಭಾರತದಲ್ಲಿ ಮೊದಲು ಕನ್ನಡ ನೆಲದಿಂದ ಲಿಂಗಾಯತ ಎಂಬ ಸ್ವತಂತ್ರ ಧರ್ಮ ಜಗತ್ತಿಗೆ ನೀಡಿದವರು ಅವರು. ಅನುಭವಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವ ಪರಿಕಲ್ಪನೆ ಕೊಟ್ಟು ಅಸ್ಪೃಶ್ಯರಿಗೆ ತುಳಿತಕ್ಕೆ ಒಳಗಾಗಿರುವ ಎಲ್ಲರನ್ನು ‘ಇವನಮ್ಮವ ಇವನಮ್ಮವ’ ಎಂದು ಅಪ್ಪಿಕೊಳ್ಳುವ ಮೂಲಕ ಸಮಸಮಾಜ ಕಟ್ಟಿದರು ಎಂದು ಸ್ಮರಿಸಿದ್ದಾರೆ.
‘ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ನೆಂದು ಘೋಷಿಸಬೇಕೆಂಬ ಉದ್ದೇಶದಿಂದ ಜ.8ರಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಮನವಿ ಮಾಡಿದ್ದೇವು. ಅದಕ್ಕೆ ತಾವು ತಕ್ಷಣವೇ ಸ್ಪಂದಿಸಿ ತೀರ್ಮಾನ ಕೈಗೊಂಡಿದ್ದಿರಿ. ಅಲ್ಲದೆ, ಶಿವಮೊಗ್ಗದ ಜೈಲು ಆವರಣಕ್ಕೆ ಅಲ್ಲಮಪ್ರಭುಗಳ ಹೆಸರನ್ನು ನಾಮಕರಣ ಮಾಡಿದ್ದೀರಿ ಹಾಗೂ ಕಿತ್ತೂರು ತಾಲೂಕನ್ನು ಚನ್ನಮ್ಮನ ಕಿತ್ತೂರು ಎಂದು ಮರುನಾಮಕರಣ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದು ಅವರು ತಿಳಿಸಿದ್ದಾರೆ.