ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲಿ ಹಗುರ ಮಳೆಯಾಗುವ ಸಾಧ್ಯತೆ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿರುತ್ತಿದ್ದು, ಒಂದೆರೆಡು ಕಡೆ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಸಾಧ್ಯತೆಗಳಿವೆ.
ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುತ್ತಿದೆ. ಇದರಿಂದ ಚಳಿ ಅನುಭವ ಹೆಚ್ಚಾಗಿ ಕಂಡುಬರುತ್ತಿದೆ. ಅಲ್ಲದೆ, ಬಹಳಷ್ಟು ಕಡೆ ಸಂಜೆ ಹಾಗೂ ಬೆಳಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಇಬ್ಬನಿ ಬೀಳುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಕೆಲವೆಡೆ ಬೆಳಗಿನ ಜಾವ ದಟ್ಟವಾದ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ.
ವಾಯುಭಾರ ಕುಸಿತದ ಪರಿಣಾಮದಿಂದ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿರುವುದರಿಂದ ಮಬ್ಬು ಕವಿದ ವಾತಾವರಣ ಸೃಷ್ಟಿಯಾಗಿದೆ. ಆದರೆ, ತಮಿಳುನಾಡಿನ ದಕ್ಷಿಣ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಮೂರು-ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಕನಿಷ್ಟ ತಾಪಮಾನದಲ್ಲೂ ಗಣನೀಯವಾಗಿ ಇಳಿಕೆಯಾಗಿದೆ. ಹಗಲಿನಲ್ಲಿ ಬಿಸಲು ಇಲ್ಲದಿರುವ ಹಾಗೂ ತಂಪಾದ ಮೇಲ್ಮೈ ಗಾಳಿ ಬೀಸುವುದರಿಂದ ಹೆಚ್ಚು ಚಳಿಯಾಗುತ್ತದೆ. ಜನವರಿ 15ರ ಸಂಕ್ರಾಂತಿ ಹಬ್ಬದ ವರೆಗೂ ಇದೇ ರೀತಿ ವಾತಾವರಣ ಕಂಡುಬರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.