ಮಾನನಷ್ಟ ಮೊಕದ್ದಮೆ: ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ
ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ವತಿಯಿಂದ ಬಿಜೆಪಿ ವಿರುದ್ಧ ನೀಡಿದ್ದ ಜಾಹೀರಾತಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಮುಗಿದ ಬಳಿಕ ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಬರಮಾಡಿಕೊಂಡರು.
ಕರ್ನಾಟಕ ಬಿಜೆಪಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಖುದ್ದಾಗಿ ಕೋರ್ಟ್ಗೆ ಹಾಜರಾಗಬೇಕಿದ್ದು, ಜೂನ್ 1ರಂದು ಖುದ್ದಾಗಿ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿರಲಿಲ್ಲ.
2023ರ ಮೇ 5ರಂದು ಕಾಂಗ್ರೆಸ್ ಪಕ್ಷವು ಪತ್ರಿಕೆಗಳಲ್ಲಿ ನೀಡಿದ್ದ ಜಾಹೀರಾತಿನಲ್ಲಿ ಬಿಜೆಪಿಯ ವಿರುದ್ಧ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಗಾಂಧಿ ನಗರ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. 2024ರ ಮಾರ್ಚ್ 11ರಂದು ನ್ಯಾಯಾಲಯವು ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿಗೊಳಿಸಿತ್ತು.
ವಿಚಾರಣೆ ಮುಗಿದ ಬಳಿಕ ಗೆದ್ದ ಹಾಗೂ ಸೋತ ಕರ್ನಾಟಕದ ಸಂಸದರೊಂದಿಗೆ ಕ್ವೀನ್ಸ್ ರಸ್ತೆಯಲ್ಲಿರುವ ಭಾರತ್ ಜೋಡೋ ಭವನದಲ್ಲಿ ಸಭೆ ನಡೆಸಲಿದ್ದಾರೆ.