ವಿಶ್ವಾಸ ದ್ರೋಹದಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲು: ಇಕ್ಬಾಲ್ ಅನ್ಸಾರಿ ಬೇಸರ
ಗಂಗಾವತಿ, ಅ.7: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲ್ಲುವ ವಿಶ್ವಾಸವಿತ್ತು. ನನ್ನ ಜೊತೆಗಿದ್ದವರು ರೆಡ್ಡಿ ಪಕ್ಷದೊಂದಿಗೆ ಕೈ ಜೋಡಿಸಿದ ಪರಿಣಾಮ ವಿಶ್ವಾಸದ್ರೋಹದಿಂದ ವಿಧಾನಸಭಾ ಚುನಾವಣೆ ಯಲ್ಲಿ ಸೋಲನ್ನು ಅನುಭವಿಸ ಬೇಕಾಯಿತು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ತಮ್ಮ ಗೃಹಕಚೇರಿಯಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಜೊತೆಯಲ್ಲಿದ್ದುಕೊಂಡೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ-ನಗರ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಿ ಅವರಿಬ್ಬರೂ ರೆಡ್ಡಿ ಜೊತೆಗೆ ಡೀಲ್ ಮಾಡಿಕೊಂಡು ನನ್ನ ಚುನಾವಣೆಯಲ್ಲಿ ಏನೂ ಕೆಲಸ ಮಾಡ್ಲಿಲ್ಲ. ಪಕ್ಷದಿಂದ ಎಲ್ಲ ಅಧಿಕಾರ ಅನುಭವಿಸಿ ಪಕ್ಷಕ್ಕೇ ಮೋಸ ಮಾಡಿದರು ಎಂದರು.
ಇನ್ನೋರ್ವ ಯುವ ಕಾಂಗ್ರೆಸ್ ಅಧ್ಯಕ್ಷ ಆಸಿಫ್ ಕೂಡಾ ಚುನಾವಣೆ ಸಂದರ್ಭದಲ್ಲಿ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದರು.
ಈ ಸ೦ದರ್ಭದಲ್ಲಿ ವಿಠಲಾಪುರ ಯಮನಪ್ಪ, ಸಣ್ಣಕ್ಕಿ ನೀಲಪ್ಪ, ಶೇಖ್ ಇಲ್ಯಾಸ್ ಬಾಬಾ, ಮರೇಶ ಗೋನಾಳ, ಖಾಸೋಂಸಾಬ್ ಗದ್ವಾಲ್, ಫಕೀರಪ್ಪ ಎಮ್ಮಿ, ಸುನೀತಾ ಶ್ಯಾವಿ, ಎಸ್.ಬಿ. ಖಾದ್ರಿ ಮತ್ತಿತರರಿದ್ದರು.