ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ | ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನ, ವರಿಷ್ಠರಿಗೆ ದೂರು ನೀಡಲು ದಿಲ್ಲಿಯಾತ್ರೆ
ಬಿಎಸ್ವೈ ರಾಜಕೀಯಕ್ಕೆ ಬಂದಾಗ ಕೆಲವರು ಇನ್ನೂ ಕಣ್ಣೇ ಬಿಟ್ಟಿರಲಿಲ್ಲ : ಎಂ.ಪಿ.ರೇಣುಕಾಚಾರ್ಯ
MP Renukacharya
ಬೆಂಗಳೂರು : ‘ವಕ್ಫ್ ಆಸ್ತಿ’ ವಿಚಾರ ಮುಂದಿಟ್ಟುಕೊಂಡು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಭಿನ್ನರು ‘ಜನಜಾಗೃತಿ ಅಭಿಯಾನ’ ನಡೆಸುತ್ತಿದ್ದಾರೆ. ಇತ್ತ ಬಿಎಸ್ವೈ ಬೆಂಬಲಿಗರು ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನ ಮತ್ತು ದಿಲ್ಲಿ ಯಾತ್ರೆಗೆ ಸಿದ್ಧತೆ ನಡೆಸಿರುವುದು ಬಿಜೆಪಿ ವಲಯದಲ್ಲೇ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಇಲ್ಲಿನ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರ ನಿವಾಸದಲ್ಲಿ ‘ಬಿಜೆಪಿ ನಿಷ್ಟ’ ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ಡಿ.ಲಕ್ಷ್ಮಿನಾರಾಯಣ ಸಹಿತ ಹತ್ತಕ್ಕೂ ಹೆಚ್ಚು ಮಂದಿ ಸಭೆ ಸೇರಿ ಸಮಾಲೋಚನೆ ನಡೆಸಿದ್ದು, ದಾವಣಗೆರೆಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.
‘ಪಕ್ಷದ ಶಿಸ್ತು ಉಲ್ಲಂಘಿಸಿ, ಪಕ್ಷದ ಅನುಮತಿ ಇಲ್ಲದೆ ಜನಜಾಗೃತಿ ಅಭಿಯಾನ’ಕ್ಕೆ ಮುಂದಾಗಿರುವ ಯತ್ನಾಳ್, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಇನ್ನಿತರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ತಕ್ಷಣವೇ ವರಿಷ್ಠರು ಮಧ್ಯಪ್ರವೇಶಿಸಿ ಯತ್ನಾಳ್ ಕೈಗೊಂಡಿರುವ ಅಭಿಯಾನ ನಿಲ್ಲಿಸಲು ಸೂಚನೆ ನೀಡಬೇಕು’ ಎಂದು ಆಗ್ರಹಿಸಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ‘ಕೆಲವರು ಪಕ್ಷಕ್ಕಿಂತ ನಾನೇ ದೊಡ್ಡವನೆಂದು ಬಿಂಬಿಸಿಕೊಂಡು ನಾಲ್ಕಾರು ಜನರೊಂದಿಗೆ ಅಭಿಯಾನ ನಡೆಸುತ್ತಿದ್ದು, ಇದರಲ್ಲಿ ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಹೆಚ್ಚಾಗಿದೆ. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು ಈಗ ಪಾದಯಾತ್ರೆ ನಡೆಸುತ್ತಿರುವವರಲ್ಲ. ಬದಲಿಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ’ ಎಂದು ವಾಗ್ದಾಳಿ ನಡೆಸಿದರು.
‘ಪಕ್ಷದಲ್ಲಿನ ಕೆಲವರು ಉದ್ದೇಶಪೂರ್ವಕವಾಗಿಯೇ ಯತ್ನಾಳ್ಗೆ ಬೆಂಬಲ ಸೂಚಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ನೀವು ಯಡಿಯೂರಪ್ಪ, ವಿಜಯೇಂದ್ರರನ್ನು ಟೀಕಿಸಿದರೆ ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸಿದಂತೆ. ಬಿಎಸ್ವೈ ರಾಜಕೀಯಕ್ಕೆ ಬಂದಾಗ ಕೆಲವರು ಇನ್ನು ಕಣ್ಣೆ ಬಿಟ್ಟಿರಲಿಲ್ಲ. ಅಂತಹವರು ನಾಲ್ಕು ಮಂದಿ ಕಟ್ಟಿಕೊಂಡು ವೈಯಕ್ತಿಕ ಪ್ರಚಾರಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ.ಇದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ’ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ನಾವು ಯಾವುದೇ ವ್ಯಕ್ತಿ ಅಥವಾ ಬಣದ ಪರ ಸಮಾವೇಶ ಮಾಡುತ್ತಿಲ್ಲ. ಬದಲಿಗೆ ಪಕ್ಷ ಸಂಘಟನೆ ಪ್ರಬಲವಾಗಬೇಕು. ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿಸಬೇಕೆಂಬುದು ನಮ್ಮ ಉದ್ದೇಶ ಎಂದ ಅವರು, ನ.29ರ ಬೆಳಗ್ಗೆ 10ಗಂಟೆಗೆ ಕೋಲಾರ ಮುಳಬಾಗಿಲು ಗಣೇಶನ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತೇವೆ. ಪಕ್ಷದ ವಿರುದ್ಧ ಹಾದಿ-ಬೀದಿಯಲ್ಲಿ ಮಾತನಾಡುವವರಿಗೆ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದರು.
‘ಯತ್ನಾಳ್ರೇ ನಿಮ್ಮ ಹೋರಾಟ ಯಾರ ವಿರುದ್ಧ, ಕಾಂಗ್ರೆಸ್ ವಿರುದ್ಧ ಇರಬೇಕು. ತುಘಲಕ್ ರೀತಿಯಲ್ಲಿ ಪ್ರವಾಸ ಹೊರಟಿದ್ದೀರಿ. ಸಿದ್ದರಾಮಯ್ಯರ ಅಡಿಯಾಳಾಗಿ ಕೆಲಸ ಮಾಡುತ್ತೀದ್ದೀರಿ. ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದು ಕಾರ್ಯಕರ್ತರ ಒಕ್ಕೊಲರ ಅಭಿಪ್ರಾಯ. ಕೆಲವರು ಆಗಲೇ ನಮ್ಮ ಬಣದವರೇ ಮುಖ್ಯಮಂತ್ರಿಯಾಗಲಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರ ಆಸೆ ಈಡೆರುವುದಿಲ್ಲ ಎಂದು ರೇಣುಕಾಚಾರ್ಯ ನುಡಿದರು.
ಉಪಚುನಾವಣೆ ಸೋಲಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದು ಹೇಳಿದರೆ, ಕಾಂಗ್ರೆಸ್ ಜೊತೆ ಒಳ ಒಪ್ಪಂದವಲ್ಲದೆ ಮತ್ತೇನು. ನಾಲ್ಕೈದು ಮಂದಿ ಸೇರಿ ಪಕ್ಷದ ರಾಜ್ಯಾಧ್ಯಕ್ಷರನ್ನು ಕೆಳಗಿಳಿಸುತ್ತೇವೆಂದು ಹೋದರೆ ಅದು ಅವರ ಭ್ರಮೆ. ಯತ್ನಾಳ್ ಪ್ರತ್ಯೇಕ ಹೋರಾಟದಿಂದ ಪಕ್ಷಕ್ಕೆ ತೊಂದರೆ ಆಗಿದೆ ಎಂದು ಕಾರ್ಯಕರ್ತರೇ ಆಕ್ಷೇಪಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ʼಯಾರ ಅನುಮತಿ ಪಡೆದು ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಯತ್ನಾಳ್ ಅಭಿಯಾನ ನಡೆಸುತ್ತಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷರು ಮೂರು ತಂಡ ರಚನೆ ಮಾಡಿದ್ದು, ಇದೇ ವೇಳೆ ಪ್ರತ್ಯೇಕ ಅಭಿಯಾನದ ಅಗತ್ಯವೇನು?. ಪಕ್ಷ ಇಲ್ಲದೆ ಪಕ್ಷದ ಚಿಹ್ನೆ ಹಿಡಿದುಕೊಂಡು ಅಭಿಯಾನಕ್ಕೆ ಮುಂದಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮಾತನಾಡುವುದಕ್ಕಿಂತ ಹೆಚ್ಚಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತನಾಡುತ್ತಿರುವುದರ ಹಿಂದಿನ ಕಾರಣವೇನು?’
-ಬಿ.ಸಿ.ಪಾಟೀಲ್ ಮಾಜಿ ಸಚಿವ