ಚಂದ್ರಯಾನ-3ರ ಯಶಸ್ವಿಗೆ ದುಡಿದ ಇಸ್ರೋ ವಿಜ್ಞಾನಿಗಳಿಗೆ ಬಿಡಿಎ ನಿವೇಶನ (ಸೈಟ್) ನೀಡಲು ಆಗ್ರಹ: ಸಿಎಂಗೆ ʼನೈಜ ಹೋರಾಟಗಾರರ ವೇದಿಕೆʼ ಪತ್ರ
ಬೆಂಗಳೂರು, ಆ.31: ‘ಚಂದ್ರಯಾನ-3ರ ಯಶಸ್ವಿಗೆ ದುಡಿದ ಇಸ್ರೋ ವಿಜ್ಞಾನಿಗಳಿಗೆ ಬಿಡಿಎ ನಿವೇಶನ (ಸೈಟ್) ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ನೈಜ ಹೋರಾಟಗಾರರ ವೇದಿಕೆಯು ಪತ್ರವನ್ನು ಬರೆದಿದೆ.
ಇಸ್ರೋನ ವಿಜ್ಞಾನಿಗಳು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿಸಿ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಇಂತಹ ವಿಜ್ಞಾನಿಗಳಿಗೆ ರಾಜ್ಯ ಸರಕಾರ ಮೈಸೂರು ಪೇಟ ತೊಡಿಸಿ ಶಾಲು ಹೊಂದಿಸಿ ಹಾರ ತುರಾಯಿಗಳನ್ನು ಅರ್ಪಿಸಿ ಗೌರವಿಸಿದರೆ ಸಾಲದು. ಬಿಡಿಎ ವತಿಯಿಂದ ಪ್ರತಿಯೊಬ್ಬ ವಿಜ್ಞಾನಿಗೂ ಸೈಟ್ ನೀಡಬೇಕು ಎಂದು ತಿಳಿಸಿದೆ.
ಕ್ರಿಕೆಟ್ ಮತ್ತು ಸಿನೆಮಾಗಳಲ್ಲಿ ಮಿಂಚುವವರಿಗೆ ಹಾಗೂ ರಾಜಕಾರಣಿಗಳಿಗೆ ಬಿಡಿಎ ಸೈಟ್‍ಗಳನ್ನು ಹಂಚಿಕೆ ಮಾಡಲಾಗುತ್ತದೆ. ಸಿನೆಮಾ ನಟರು ಸತ್ತರೆ ಅವರ ಶವ ಸಂಸ್ಕಾರಕ್ಕೆ ರಾಜ್ಯ ಸರಕಾರವು ಜಮೀನನ್ನು ನೀಡುತ್ತದೆ. ಆದರೆ ವಿಜ್ಞಾನಿಗಳನ್ನು ರಾಜ್ಯ ಸರಕಾರ ಕಡೆಗಣಿಸುತ್ತದೆ. ಹಾಗಾಗಿ ರಾಜ್ಯ ಸರಕಾರವು ಇಸ್ರೋ ವಿಜ್ಞಾನಿಗಳ ಸಾಧನೆಗಳನ್ನು ಮನಗಂಡು ಬಿಡಿಎ ಸೈಟ್‍ಗಳನ್ನು ಚಂದ್ರಯಾನ-3ರ ಯಶಸ್ವಿಗೆ ದುಡಿದವರಿಗೆ ಸೈಟ್ ಹಂಚಬೇಕು ಎಂದು ಒತ್ತಾಯಿಸಿದೆ.