ತುಮಕೂರು ಜಿಲ್ಲೆಯಲ್ಲಿರುವ 2,436 ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಣೆ: ಕಾನೂನು ಕ್ರಮಕ್ಕೆ ಡಿಸಿ ಕೆ.ಶ್ರೀನಿವಾಸ್ ಸೂಚನೆ
ತುಮಕೂರು, ಆ.18: ಜಿಲ್ಲೆಯಲ್ಲಿರುವ 2,436 ಮುಜರಾಯಿ ಹಾಗೂ ಇತರ ದೇವಸ್ಥಾನಗಳಲ್ಲಿ ದಲಿತ ಜನಾಂಗದವರಿಗೆ ಪ್ರವೇಶಾವಕಾಶ ನಿರಾಕರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಜರುಗಿದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟಪಂಗಡದವರ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಎಲ್ಲ ಮುಜರಾಯಿ ಮತ್ತು ಇತರ ದೇವಸ್ಥಾನಗಳ ಮುಂದೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಗೋಡೆ ಬರಹ ಬರೆಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದೇವಸ್ಥಾನಗಳ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ ಎಂದು ಗೋಡೆ ಬರಹವಿದ್ದರೂ ದಲಿತರ ಪ್ರವೇಶವನ್ನು ನಿರಾಕರಿಸುವುದು ಕಂಡು ಬಂದಲ್ಲಿ ಆಯಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ತಹಶೀಲ್ದಾರರೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 2022ರ ಡಿಸೆಂಬರ್ 21 ರಿಂದ 2023ರ ಜುಲೈ 31 ರವರೆಗೆ 67 ಪರಿಶಿಷ್ಟಜಾತಿ ಹಾಗೂ 22 ಪರಿಶಿಷ್ಟ ಪಂಗಡ ಸೇರಿ ಒಟ್ಟು 89 ದೌರ್ಜನ್ಯ ಪ್ರಕರಣಗಳು ವರದಿಯಾಗಿ ದ್ದುಈವರೆಗೂ 1.10 ಕೋಟಿ ರೂ.ಗಳ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸಭೆಗೆ ಮಾಹಿತಿ ನೀಡಿದರು.
ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಪ್ರಸಕ್ತ 2023ರ ಕ್ಯಾಲೆಂಡರ್ ವರ್ಷದ ಜುಲೈ ಅಂತ್ಯದವರೆಗೆ ಪರಿಶಿಷ್ಟ ಜಾತಿ, ಪ.ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ದಾಖಲಾಗಿರುವ 48 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇರುವ ಹಾಗೂ ತನಿಖೆ ಹಂತದಲ್ಲಿರುವ ಪ್ರಕರಣಗಳ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದೆ ಶೀಘ್ರ ವಿಲೇವಾರಿಗೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ರಂಗಯ್ಯ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ದೌರ್ಜನ್ಯ ಪ್ರಕರಣಗಳು ಘಟಿಸಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ರಕ್ಷಣೆ ಹಾಗೂ ಪರಿಹಾರ ಒದಗಿ ಸಲು ಕ್ರಮ ಕೈಗೊಳ್ಳಬೇಕು. ಪೊಲೀಸ್, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಕಚೇರಿಗಳು ಜಂಟಿಯಾಗಿ ಶಾಂತಿ ಸಭೆಗಳನ್ನು ನಡೆಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಕೆಲಸ ಮಾಡಬೇಕೆಂದು ಸೂಚಿಸಿದರು.
ತುಮಕೂರು ಜಿಲ್ಲೆಯಲ್ಲಿ ವರದಿಯಾದ 89 ದೌರ್ಜನ್ಯ ಪ್ರಕರಣಗಳ ಪೈಕಿ 55 ಮಹಿಳೆ ಹಾಗೂ 65 ಪುರುಷರು ಸೇರಿ 120 ಸಂತ್ರಸ್ತರಿಗೆ ಪರಿಹಾರ ಮಂಜೂರಾಗಿದ್ದು,ಈ ಪೈಕಿ ಪರಿಶಿಷ್ಟ ಜಾತಿಯ 91 ಸಂತ್ರಸ್ತರಿಗೆ 82,10,850 ರೂ. ಹಾಗೂ ಪ.ವರ್ಗದವರಿಗೆ 28,01,200 ರೂ. ಗಳ ಪರಿಹಾರ ಮಂಜೂರಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಪಂಗಡಕ್ಕೆ ಸಂಬಂಧಿಸಿದಂತೆ 71 ಜಾತಿ ನಿಂದನೆ, ಹಲ್ಲೆ 9ಕೊಲೆ, 9 ಅತ್ಯಾಚಾರ, ಅಪಹರಣ, ಲೈಂಗಿಕ ಕಿರುಕುಳ, ಮಾನಸಿಕ ಹಲ್ಲೆ ಸ್ವರೂಪದ ಪ್ರಕರಣಗಳಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ವಿವರಿಸಿದರು.
182 ಪ್ರಮಾಣ ಪತ್ರ ಅಸಿಂಧು:
ತುಮಕೂರು ಜಿಲ್ಲೆಯಲ್ಲಿ ಬೇಡ ಜಂಗಮ ಜಾತಿ ಇಲ್ಲದ ಕಾರಣ ಈಗಾಗಲೇ 182 ಮಂದಿಗೆ ನೀಡಲಾಗಿ ರುವ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಅಸಿಂಧುಗೊಳಿಸಲಾಗಿ ದ್ದು ಅಸಿಂಧುಗೊಳಿಸಿರುವ ಪಟ್ಟಿಯನ್ನು ಎಲ್ಲಾ ಇಲಾಖೆಗಳ ವೆಬ್ ಸೈಟ್‌ನಲ್ಲಿ ಪ್ರಚುರಪಡಿಸಬೇಕು. ಇಲ್ಲದಿದ್ದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿರುವ ಸೌಲಭ್ಯಗಳು ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ಅಸಿಂಧುಗೊಳಿಸಿದ ಜಾತಿ ಪ್ರಮಾಣಪತ್ರ ಹೊಂದಿದವರು ನಿಯಮ ಮೀರಿ ಸರಕಾರದ ಸೌಲಭ್ಯ ಪಡೆಯುತ್ತಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟ ಜಾತಿ/ಪರಿಶಿಷ್ಟಪಂಗಡದವರ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ರಂಗಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತ ಅರಿದ, ಉಪವಿಭಾಗಾಧಿಕಾರಿಗಳಾದ ಗೌರವಕುಮಾರ್ ಶೆಟ್ಟಿ ಹಾಗೂ ರಿಷಿಆನಂದ್, ತಹಶೀಲ್ದಾರರು, ವಿವಿಧ ಇಲಾಖಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.