ಲಂಚ ನೀಡಲು ನಿರಾಕರಿಸಿದ್ದಕ್ಕೆ ವರ್ಗಾವಣೆ ನಿರಾಕರಣೆ; ಸಿಎಂಗೆ ಪತ್ರ ಬರೆದರೂ ಸಿಗದ ಪರಿಹಾರ
ನೌಕರನ ಕುಟುಂಬದ ಸದಸ್ಯರು
ಬೆಂಗಳೂರು, ಅ.7: ಸಾಮಾನ್ಯ ವರ್ಗಾವಣೆ ಸಂಬಂಧ ಮೇಲಾಧಿಕಾರಿಗೆ ಲಂಚ ನೀಡಲು ನಿರಾಕರಿಸಿದ ಕಾರಣಕ್ಕೆ ಸತತ 10 ವರ್ಷಗಳಿಂದ ವರ್ಗಾವಣೆ ಮಾಡದೆ ಡಿ ದರ್ಜೆ ನೌಕರರೊಬ್ಬರನ್ನು ಅಲೆದಾಡಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಸ್ವತಃ ಸಿಎಂ ಕಚೇರಿಗೆ ಪತ್ರ ಬರೆದು, ಲಿಖಿತ ದೂರು ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ರಾಜ್ಯ ಸರಕಾರದ ಕರ್ನಾಟಕ ಭವನದ ಕೊಠಡಿ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ಡಿ ದರ್ಜೆ ನೌಕರರೊಬ್ಬರು ಅನ್ಯಾಯಕ್ಕೊಳಗಾಗಿದ್ದಾರೆ. ಅವರನ್ನು ರಾಜ್ಯ ಸರಕಾರದ ಸಚಿವಾಲಯಕ್ಕೆ ವರ್ಗಾವಣೆ ಮಾಡಿಕೊಂಡುವಂತೆ ಕೋರಿ ಅವರ ಪತ್ನಿ ದಿನಾಲೂ ಸರಕಾರಿ ಕಚೇರಿಗಳನ್ನು ಅಲೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ಕುರಿತು ʼವಾರ್ತಾಭಾರತಿʼ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂತ್ರಸ್ತ ನೌಕರನ ಪತ್ನಿ ನಾಝಿಯಾ ತರನ್ನುಮ್, ಕರ್ನಾಟಕ ಭವನದಲ್ಲಿ 2002ರಿಂದ 2014ರ ವರೆಗೆ 12 ವರ್ಷ ಕೊಠಡಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದ ನನ್ನ ಪತಿ ಕೌಟುಂಬಿಕ ಕಾರಣಗಳ ಹಿನ್ನೆಲೆಯಲ್ಲಿ 2013ರಲ್ಲಿ ರಾಜ್ಯ ಸಚಿವಾಲಯಕ್ಕೆ ಶಾಶ್ವತ ವರ್ಗಾವಣೆ ಮಾಡಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದರು.
2014ರಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವರ್ಗಾವಣೆಗೆ ಅನುಮೋದನೆಯನ್ನು ನೀಡಿದ್ದರು. ಆದರೆ, ವರ್ಗಾವಣೆಯ ಕಡತ ಮುಖ್ಯಮಂತ್ರಿಯ ಸಹಿಗೆ ಕಳುಹಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದೇ ಇದ್ದಾಗ ವರ್ಗಾವಣೆಯ ಕಡತದ ಹಾದಿಯನ್ನು ತಪ್ಪಿಸಲಾಯಿತು ಎಂದು ಅವರು ಅಳಲು ತೋಡಿಕೊಂಡರು.
ಅಂದಿನಿಂದ ಈವರೆಗೂ ಸರಕಾರಿ ಕಚೇರಿಗಳನ್ನು ಅಲೆಯುತ್ತಿದ್ದೇವೆ. ಸಚಿವ ಶಿವಾನಂದ ಪಾಟೀಲ್ ಶಿಫಾರಸ್ಸು ಮಾಡಿ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ವರ್ಗಾಯಿಸಲು ಅಗತ್ಯಕ್ರಮ ಕೈಗೊಳ್ಳುವುದು ಎಂದು ಪತ್ರ ಬರೆದಿದ್ದರೂ ನಮ್ಮ ಪಾಲಿಗೆ ವರ್ಗಾವಣೆಯ ಭಾಗ್ಯ ಮರಿಚಿಕೆಯಾಗಿದೆ ಎಂದು ನಾಝಿಯಾ ತರನ್ನುಮ್ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಸಚಿವಾಲಯದ ಶಿಷ್ಠಾಚಾರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ನನ್ನ ಪತಿಯೂ 2015 ರಿಂದ ಕುಮಾರಕೃಪಾ ಅತಿಥಿಗೃಹದಲ್ಲಿ ನಿಯೋಜನೆ ಮೇರೆಗೆ ಗ್ರೂಪ್ ಡಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಭವನದಲ್ಲಿ 5-6 ವರ್ಷಗಳು ಸೇವೆ ಮಾಡಿದವರಿಗೆಲ್ಲ ಡಿಪಿಎಆರ್ ಅಭಿಪ್ರಾಯವನ್ನು ಪಡೆಯದೆ ಒಂದೆ ದಿನದಲ್ಲಿ ಭಡ್ತಿ-ವರ್ಗಾವಣೆ ಮಾಡಿರುವ ಉದಾಹರಣೆಗಳು ಇವೆ. ಆದರೆ, ನಾವು ಕಾನೂನು ಬದ್ಧವಾಗಿ 10 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ನಮಗೆ ನ್ಯಾಯ ದೊರಕುತ್ತಿಲ್ಲ ಎಂದು ಅವರು ಕಣ್ಣೀರು ಹಾಕಿದರು.
2002ರಿಂದ ಕರ್ನಾಟಕ ಭವನದಲ್ಲಿ ಕೊಠಡಿ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದಾಗ ನಿವಾಸಿ ಆಯುಕ್ತರ ಕಚೇರಿಯಲ್ಲಿ ದಲಾಯತ್ ಹುದ್ದೆಯಲ್ಲಿ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸಲು ನನ್ನ ಪತಿಗೆ ಆದೇಶಿಸಲಾಗಿತ್ತು. ಆನಂತರ ಈ ಸಂಬಂಧ ಸರಕಾರದ ಅನುಮೋದನೆ ಪಡೆಯಲು ಉದ್ದೇಶಿಸಲಾಗಿತ್ತು. ಆದರೆ, ನಮ್ಮ ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸಚಿವಾಲಯಕ್ಕೆ ವರ್ಗಾವಣೆ ಮಾಡುವಂತೆ ನಾವು ಮನವಿ ಮಾಡಿದ್ದೆವು ಎಂದು ಅವರು ತಿಳಿಸಿದರು.
2011ರಲ್ಲಿ ಕಚೇರಿ ಆದೇಶವನ್ನು ಕೈ ಬಿಟ್ಟು, ನಿವಾಸಿ ಆಯುಕ್ತರ ಕಚೇರಿಯಲ್ಲಿ ದಲಾಯತ್ ಹುದ್ದೆಯಲ್ಲಿ ಸಲ್ಲಿಸಿರುವ ಸೇವೆಯನ್ನು ನಿಯೋಜನೆಯೆಂದು ಪರಿಗಣಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ 2014ರಲ್ಲಿ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿತ್ತು ಎಂದು ನಾಝಿಯಾ ತರನ್ನುಮ್ ಹೇಳಿದರು.
ಅಲ್ಲದೆ, ನನ್ನ ಪತಿಯ ಮನವಿಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ, ರಾಜ್ಯ ಸರಕಾರದ ಸಚಿವಾಲಯದಲ್ಲಿ ಖಾಲಿಯಿರುವ ಗ್ರೂಪ್ ಡಿ ಹುದ್ದೆಗೆ ಶಾಶ್ವತ ವರ್ಗಾವಣೆ ಮೂಲಕ ವಿಲೀನಗೊಳಿಸುವಂತೆ ನಿವಾಸಿ ಆಯುಕ್ತರು ಮನವಿ ಮಾಡಿದ್ದರು. ಆದರೆ, ಈವರೆಗೆ ನಮ್ಮ ಕುಟುಂಬಕ್ಕೆ ಮಾತ್ರ ವರ್ಗಾವಣೆಯ ಸೌಲಭ್ಯ ಸಿಗಲಿಲ್ಲ ಎಂದು ನಾಝಿಯಾ ತರನ್ನುಮ್ ಕಣ್ಣೀರು ಹಾಕಿದರು.
ಪ್ರತೀ ವರ್ಷ ನಮ್ಮ ಮಕ್ಕಳ ಪರೀಕ್ಷೆಯ ಸಮಯದಲ್ಲಿ ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ. ಕರ್ನಾಟಕ ಭವನದಲ್ಲಿ 5-6 ವರ್ಷಗಳು ಸೇವೆ ಮಾಡಿದವರಿಗೆಲ್ಲ ಡಿಪಿಎಆರ್ ಅಭಿಪ್ರಾಯವನ್ನು ಪಡೆಯದೆ ಒಂದೇ ದಿನದಲ್ಲಿ ಭಡ್ತಿ-ವರ್ಗಾವಣೆ ಮಾಡಿರುವ ಉದಾಹರಣೆಗಳು ಇವೆ. ಆದರೆ, ನಾವು ಕಾನೂನು ಬದ್ಧವಾಗಿ 10 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ನ್ಯಾಯ ಸಿಕ್ಕಿಲ್ಲ. ನಮಗೆ ನೀಡುತ್ತಿರುವ ಒತ್ತಡದಿಂದಾಗಿ ನನ್ನ ಪತಿಯ ಆರೋಗ್ಯ ಹಾಳಾಗುತ್ತಿದೆ. ಸರಕಾರ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ಗಾವಣೆಗೆ ಕ್ರಮ ಕೈಗೊಳ್ಳ ಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ.
- ನಾಝಿಯಾ ತರನ್ನುಮ್, ನೌಕರನ ಪತ್ನಿ