ರಾಜ್ಯದಲ್ಲಿ ನಿಷೇಧಿತ ಪಟಾಕಿಗಳ ಮಾರಾಟ ನಿಯಂತ್ರಣಕ್ಕೆ ಮುಂದಾದ ಸರಕಾರ; ಗೋದಾಮು ಜಪ್ತಿಗೆ ಆದೇಶ
(File photo | PTI)
ಬೆಂಗಳೂರು, ನ.2: ದೀಪಾವಳಿ ಹಬ್ಬದ ಹಿನ್ನೆಲೆ ರಾಜ್ಯ ವ್ಯಾಪಿ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತ ಪಟಾಕಿ ಮಾರಾಟ ಮತ್ತು ಬಳಕೆ ನಿಯಂತ್ರಣಕ್ಕೆ ಮುಂದಾಗಿರುವ ಪೌರಾಡಳಿತ ಇಲಾಖೆ, ಹಸಿರು ಪಟಾಕಿ ಹೊರತುಪಡಿಸಿ ಇನ್ನಿತರೆ ಹಾನಿಕರ ಪಟಾಕಿಗಳನ್ನು ಕಂಡರೆ ಗೋದಾಮು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಮ್ಮ ವ್ಯಾಪ್ತಿಯಲ್ಲಿನ ಜಿಲ್ಲಾ ಅಗ್ನಿಶಾಮಕ ವಲಯ ಅಧಿಕಾರಿ, ಸ್ನಳೀಯ ಸಂಸ್ಥೆಯ ಮುಖ್ಯಸ್ಥರು, ಆರೋಗ್ಯಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಪರಿಸರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆಸಕ್ತ ನಾಗರೀಕರು ಹಾಗೂ ಸ್ಥಳೀಯ ಸರಕಾರೇತರ ಸಂಘ ಸಂಸ್ಥೆಗಳ ಪುತಿನಿಧಿಗಳನ್ನೊಳಗೊಂಡ ಕಾರ್ಯಪಡೆಗಳನ್ನು ರಚಿಸಬೇಕು.
ತಮ್ಮ ವ್ಯಾಪ್ತಿಯಲ್ಲಿನ ಎಲ್ಲ್ಲ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ವರಿಶೀಲಿಸಿ, ಹಸಿರು ಪಟಾಕಿ ಹೊರತುಪಡಿಸಿ ಇನ್ನಾವುದಾದರೂ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದಲ್ಲಿ, ಇಡೀ ಗೋದಾಮು ಮುಟ್ಟುಗೋಲು ಹಾಕಿಕೊಳ್ಳಬೇಕು. ಅದೇ ರೀತಿ, ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸೂಚನೆ ನೀಡಲಾಗಿದೆ.
ಎಲ್ಲ ಹಸಿರು ಪಟಾಕಿಗಳ ಮೇಲೆ ಹಸಿರು ಪಟಾಕಿಯ ಚಿನ್ನೆ, ಕ್ಯೂಆರ್ ಕೋಡ್ ಉಲ್ಲೇಖ ಇರಬೇಕು. ಈ ನಿಟ್ಟಿನಲ್ಲಿ ಪರಿಸರ ಅಧಿಕಾರಿಗಳಿಂದ ಖಚಿತ ಪಡಿಸಿಕೊಂಡು ಮಾರಾಟ ಮಾಡಬೇಕು. ಒಂದು ವೇಳೆ ಪಟಾಕಿ ಪ್ಯಾಕೆಟ್ ಮೇಲೆ ಚಿನ್ಹೆ ಇಲ್ಲದಿದ್ದರೆ ಜಪ್ತಿ ಮಾಡಬೇಕು. ಹಾಗೇ, ಅದರ ಶಬ್ದ ಮಟ್ಟ ಮಾಪನ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.
ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಕೆ ಮಾಡಬೇಕು. ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು, ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ಯಾವುದೇ ಸ್ಥಳೀಯ ಆಸ್ಪತ್ರೆ, ಶಿಕ್ಷಣ ಸಂಸ್ಥೆ, ನಿಷೇಧಿತ ಪ್ರದೇಶಗಳಲ್ಲಿ ಪಟಾಕಿ ಸ್ಫೋಟಿಸುವಂತಿಲ್ಲ. ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳನ್ನು ಸಾಗಾಣೆ ಮಾಡುತ್ತಿದ್ದಲ್ಲಿ ಕೂಡಲೇ ವಾಣಿಜ್ಯ ತೆರಿಗೆ ಇಲಾಖೆವತಿಯಿಂದ ರಾಜ್ಯದ ಗಡಿಗಳಲ್ಲಿರುವ ತನಿಖಾ ಠಾಣೆಗಳಲ್ಲಿ ನಿಷೇಧಿತ ಪಟಾಕಿಗಳನ್ನು ಜಪ್ತಿ ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.