ಭಾರತೀಯರ ಗಡಿಪಾರು; ಮೋದಿ ಸರಕಾರದಿಂದ ಶೋಚನೀಯ ನಿರ್ವಹಣೆ: ನಟ ಕಿಶೋರ್ ಕುಮಾರ್

PC: x.com/pritambiswas103
ಹೊಸದಿಲ್ಲಿ: ಅಮೆರಿಕದಿಂದ ಅಕ್ರಮ ವಲಸಿಗರನ್ನು ಕೈಕೋಳ ಹಾಕಿ ಅಮಾನವೀಯವಾಗಿ ಗಡಿಪಾರು ಮಾಡಲಾಗಿದೆ. ವಲಸಿಗರ ಗಡಿಪಾರಿಗೆ ಸಂಬಂಧಿಸಿ ಮೋದಿ ಸರಕಾರದ ನಿರ್ವಹಣೆ ಕಳಪೆ ಮತ್ತು ಶೋಚನೀಯವಾಗಿದೆ ಎಂದು ಖ್ಯಾತ ನಟ ಕಿಶೋರ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ನಟ ಕಿಶೋರ್ ಕುಮಾರ್, ʼಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲʼ ಎಂಬ ಬಸವಣ್ಣನವರ ವಾಕ್ಯವನ್ನು ಉಲ್ಲೇಖಿಸಿದ್ದಾರೆ. ವಲಸೆ ಎಂಬುವುದು ಆರೋಗ್ಯಕರ ಮತ್ತು ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ. ಜಾತಿ, ಧರ್ಮ, ಭಾಷೆ, ರಾಜ್ಯಗಳ ಗಡಿಗಳನ್ನು ಮೀರಿ, ಕಡಿಮೆ ಸಂಪನ್ಮೂಲಗಳ ಪ್ರದೇಶಗಳಿಂದ ಸಮೃದ್ಧ ಪ್ರದೇಶಗಳಿಗೆ ತೆರಳುವುದಾಗಿದೆ. ವಲಸೆಯಿಂದ ಸ್ಥಳೀಯ ಸಂಸ್ಕೃತಿಗಳ ಬಲವರ್ಧನೆ ಕೂಡ ಆಗಲಿದೆ. ಹೌದು, ಮನುಷ್ಯ, ತನ್ನನ್ನು ತಾನು ಶ್ರೇಷ್ಠ ಪ್ರಾಣಿ ಎಂದು ಭಾವಿಸುತ್ತಾನೆ. ಸುಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ತನ್ನದೇ ಆದ ರಾಜಕೀಯವಾಡಲು ಭೌಗೋಳಿಕ ಗಡಿಗಳನ್ನು ಹಾಕಿದ್ದಾನೆ. ಅದು ಯಾವುದೇ ದೇಶ ಅಥವಾ ಶಕ್ತಿಗೆ ಜೀವವನ್ನು ನಿರ್ಲಕ್ಷಿಸಲು ಮತ್ತು ಅವಮಾನಿಸಲು ಅವಕಾಶ ನೀಡುವುದಿಲ್ಲ. ಅಕ್ರಮ ವಲಸಿಗರ ಬಗ್ಗೆ ಅಮೆರಿಕದ ಹೇಳಿಕೆ ಮತ್ತು ವರ್ತನೆ, ಸಾಮಾನ್ಯವಾಗಿ ಜೀವ ಜಗತ್ತಿಗೆ ಮತ್ತು ನಿರ್ದಿಷ್ಟವಾಗಿ ಮಾನವ ಜನಾಂಗಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಮೋದಿ ಸರ್ಕಾರದ ಈ ಕೆಟ್ಟ ರೀತಿಯ ಕಳಪೆ ನಿರ್ವಹಣೆ ಮತ್ತು ಅವರ ಡಂಕಾ, ವಾರ್ ರುಕ್ವಾ ಡೀ ಪಾಪಾ ಅಥವಾ ವಿಶ್ವಗುರು ಬಕ್ವಾಸ್ ಬಗ್ಗೆ ಮಾತನಾಡದಿರುವುದೇ ಉತ್ತಮ ಎಂದು ಹೇಳಿದ್ದಾರೆ. ಸಂಕೋಲೆಯಲ್ಲಿ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದರಿಂದ ಹಿಡಿದು ಚೀನಾದಿಂದ ಒಳನುಗ್ಗುವಿಕೆ, ರೈಲು ಅಪಘಾತಗಳಿಂದ ಚುನಾವಣಾ ಬಾಂಡ್ ಭ್ರಷ್ಟಾಚಾರದವರೆಗೆ ಎಲ್ಲವನ್ನೂ ಮೋದಿ ಆಡಳಿತದಲ್ಲಿ ಸಾಮಾನ್ಯಗೊಳಿಸಲಾಗಿದೆ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28