ದಿನೇಶ್ ಗುಂಡೂರಾವ್ ಕುಟುಂಬದ ಕುರಿತು ಅವಹೇಳನಾಕಾರಿ ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ದೂರು
ನನ್ನ ಭಾರತೀಯತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ ತಬು ರಾವ್
ಬೆಂಗಳೂರು: ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ’ ಎಂಬ ಹೇಳಿಕೆ ನೀಡಿದ್ದ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇಲ್ಲಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೂರು ದಾಖಲಿಸಲಾಗಿದೆ.
ಸಚಿವ ದಿನೇಶ್ ಗುಂಡೂರಾವ್ ಅವರ ಕುಟುಂಬಸ್ಥರನ್ನು ಅವಮಾನಿಸಿದ್ದಾರೆ. ಚುನಾವಣೆ ಸಮಯದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಇದೊಂದು ದೇಶ ವಿರೋಧಿ ಹೇಳಿಕೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ವಿವರ: ಎ.6ರಂದು ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ವಿಚಾರಣೆ ನಡೆಸಿದ್ದ ಎನ್‍ಐಎ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ದಿನೇಶ್ ಗುಂಡೂರಾವ್ ಕುಟುಂಬದ ಬಗ್ಗೆ ಮಾತಾಡಿದ್ದರು. ಈ ವೇಳೆ ಸಚಿವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದಿದ್ದರು.
ಶಾಸಕ ಯತ್ನಾಳ್ ನೀಡಿರುವ ಹೇಳಿಕೆಗೆ ದಿನೇಶ್ ಗುಂಡೂರಾವ್ ಅವರ ಪತ್ನಿ ತಬುರಾವ್ ಪ್ರತಿಕ್ರಿಯಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ‘ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬ ಯತ್ನಾಳ್ ಅವರ ಹೇಳಿಕೆಯು ಅವಹೇಳನಕಾರಿ ಮತ್ತು ಮಾನಹಾನಿಕರವಾಗಿದೆ. ನಾನು ಮುಸಲ್ಮಾನಳಾಗಿ ಹುಟ್ಟಿರಬಹುದು. ಹಾಗಂತ ನನ್ನ ಭಾರತೀಯತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಭಾರತೀಯ ಚುನಾವಣಾ ಆಯೋಗ ಈ ಸಂಬಂಧ ಕ್ರಮ ಕೈಗೊಳ್ಳಲಿದೆಯಾ? ಪ್ರಧಾನಿ ಮೋದಿ, ಜೆಪಿ ನಡ್ಡಾ ಅವರು ಈ ವಾಡಿಕೆಯ ತಪ್ಪಿತಸ್ಥನ ವಿರುದ್ದ ಕ್ರಮ ಕೈಗೊಳ್ಳುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.
ತಬುರಾವ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ‘ಇದು ತುಂಬಾ ದೂರು ಹೋಗಿದೆ. ಕೆಟ್ಟ ರಾಜಕೀಯಕ್ಕಾಗಿ ಕುಟುಂಬದ ಸದಸ್ಯರನ್ನು ಎಳೆದು ತರುವುದು ಕಡಿಮೆ. ಆದರೆ, ಧರ್ಮದ ಆಧಾರದ ಮೇಲೆ ಮಹಿಳೆಯ ದೇಶ ಪ್ರೇಮವನ್ನು ಪ್ರಶ್ನಿಸುವುದು. ಯತ್ನಾಳ್ ಈಗಾಗಲೇ ಕೊಚ್ಚೆಯಲ್ಲಿ ಬಿದ್ದಾಗಿದೆ. ಅವರಿಗೆ ಇನ್ನೂ ಅವಮಾನಕರವಾದದ್ದು ಏನೂ ಇಲ್ಲ. ನಾವು ನಿಮ್ಮ ಜೊತೆಗಿದ್ದೇವೆ ತಬು ಮೇಡಂ, ಅವರನ್ನು ನ್ಯಾಯಾಲಯಕ್ಕೆ ಎಳೆದು ತನ್ನಿ’ ಎಂದು ಹೇಳಿದ್ದಾರೆ.