ತಮಿಳರ ವಿರುದ್ಧ ಅವಹೇಳನಕಾರಿ ಹೇಳಿಕೆ : ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
ಬೆಂಗಳೂರು : ತಮಿಳರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ನಗರ್ತಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಾಗೂ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ನಗರ್ತಪೇಟೆ ಪೋಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿಚಾರಣೆ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಾತು ಆಡಿದರೆ ಮುತ್ತಿನಂತಿರಬೇಕು ಎಂದು ಅಭಿಪ್ರಾಯ ಪಟ್ಟಿರುವ ಪೀಠ, ನಿಮ್ಮ ಕಕ್ಷಿದಾರರಿಗೆ ಹೇಗೆ ಮಾತನಾಡಬೇಕು ಎಂಬುದರ ಕುರಿತು ಅರಿವು ಮೂಡಿಸಬೇಕು ಎಂದು ಪೀಠ ಮೌಖಿಕವಾಗಿ ಹೇಳಿದೆ.
ಇತ್ತೀಚೆಗೆ ನಗರ್ತಪೇಟೆಯಲ್ಲಿ ನಡೆಸಿದ ಪ್ರತಿಭಟನೆ ವೇಳೆ ತಮಿಳುನಾಡಿನಿಂದ ನಗರಕ್ಕೆ ಬಂದು ಬಾಂಬ್ ಬ್ಲಾಸ್ಟ್ ಮಾಡ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಈ ಸಂಬಂಧ ಕೇಂದ್ರ ಚುನಾವಣಾ ಅಧಿಕಾರಿಗಳು, ಆರೋಪ ಸಂಬಂಧ ಪರಿಶೀಲಿಸಿ ಕ್ರಮಕ್ಕೆ ಸೂಚನೆ ನೀಡಿದ್ದರು. ಹೀಗಾಗಿ ರಾಜ್ಯ ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿತ್ತು.