ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ "ದೇವರಾಜ ಅರಸು" ಹೆಸರು: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಆ.20: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶಕ್ಕೆ " ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಹೆಸರಿಡಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೆ ಜನ್ಮ ದಿನಾಚರಣೆ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಪ್ರಸ್ತುತ ಸಾಲಿನ ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ, ಸಿಲಿಕಾನ್ ಸಿಟಿ ಎಂದು ಹೆಸರು, ಹೆಗ್ಗಳಿಕೆ ಬರಲು ಅವರೇ ನೇರ ಕಾರಣವಾಗಿದ್ದಾರೆ. ಇನ್ನೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಸಾವಿರಾರು ಎಕರೆ ಭೂಮಿ ನೀಡಿದ್ದು ಅರಸು ಅವರೇ. ಹಾಗಾಗಿ, ಎಲೆಕ್ಟ್ರಾನಿಕ್ ಸಿಟಿಗೆ ಅರಸು ಅವರ ಹೆಸರು ನಾಮಕರಣ ಮಾಡಲು ತೀರ್ಮಾನಿಸಲಾಗಿದ್ದು, ಈ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಯಾರು ವಿಧಾನಸೌಧದ ಕನಸು ಕಾಣಲೂ ಸಾಧ್ಯ ಇರಲಿಲ್ಲವೂ ಅಂತಹ ಜಾತಿಗಳ ಪ್ರತಿನಿಧಿಗಳು ವಿಧಾನಸೌಧಕ್ಕೆ ಆರಿಸಿ ಬಂದು ಮಂತ್ರಿಗಳಾಗುವ ಹಾಗೆ ಕ್ರಾಂತಿ ಮಾಡಿದವರು ಅರಸು. ಅವರೊಂದಿಗೆ ನಾನು ಕೆಲಸ ಮಾಡಿರಲಿಲ್ಲ. ಆದರೆ ಅವರ ಮೇಲೆ ಅಪಾರ ಗೌರವವಿದೆ. ಅರಸು ಅವರು ಆರು ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕರ್ನಾಟಕದ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಬಣ್ಣಿಸಿದರು.
ದೇವರಾಜ ಅರಸು ಅವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಛಲ ಇತ್ತು. ಹೀಗಾಗಿ ಮಲ ಹೊರುವ ಪದ್ಧತಿ ನಿಲ್ಲಿಸಿದರು. ಜೀತ ವ್ಯವಸ್ಥೆಗೆ ಮುಕ್ತಿ ಹಾಡಿದರು. ಹಿಂದುಳಿದ ಸಮುದಾಯಗಳ ಮೀಸಲಾತಿಗಾಗಿ ಹಾವನೂರು ಆಯೋಗ ರಚಿಸಿದರು. ಉಳುವವನೇ ಭೂ ಒಡೆಯ ಕಾನೂನು ಜಾರಿ ಮಾಡಿದರು. ಹೀಗಾಗಿ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಎಲ್ಲರು ಇಂದಿಗೂ ಸ್ಮರಿಸುತ್ತಿದ್ದಾರೆ. ದನಿ ಇಲ್ಲದ ಜನರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಕೊಡುವ ಮೂಲಕ ಅವರಿಗೆ ದನಿ ಕೊಡುವ ಪ್ರಯತ್ನ ಮಾಡಿದರು. ಅವರ ಕೆಲಸಗಳೇ ನಮಗೆ ಸ್ಫೂರ್ತಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ್.ಎಸ್.ತಂಗಡಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ತಿನ ಸದಸ್ಯ ನಾಗರಾಜ ಯಾದವ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಪ್ರಮುಖರಿದ್ದರು.
ಅರಸು ಮಾರ್ಗದರ್ಶನ..!
ನಾವೇನಾದರೂ ಸಾಮಾಜಿಕ ನ್ಯಾಯದ ಪರವಾಗಿದ್ದೇವೆ, ಅವಕಾಶ ವಂಚಿತರಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಅಂದರೆ ಅದಕ್ಕೆ ದೇವರಾಜ ಅರಸು ಹಾಕಿಕೊಟ್ಟ ಮಾರ್ಗ ದರ್ಶನವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಬಿಜೆಪಿಯಿಂದ "ಉಳ್ಳವನೇ ಭೂಮಿ ಒಡೆಯ":ಸಿದ್ದರಾಮಯ್ಯ
ದೇವರಾಜ ಅರಸರು ಜಾರಿಗೆ ತಂದಿದ್ದು, ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ ಈಗ ಬಿಜೆಪಿ ಬಂದ ಮೇಲೆ "ಉಳ್ಳವನೇ ಭೂಮಿ ಒಡೆಯ" ಎನ್ನುವಂತಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.