ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಕರಣ: ಮಾಜಿ ಎಂ.ಡಿ ಶಂಕರಪ್ಪ ಬಂಧನ

ಬೆಂಗಳೂರು: ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ (ಡಿಡಿಯುಟಿಟಿಎಲ್) ನಡೆದಿದೆ ಎನ್ನಲಾದ ₹ 47.10 ಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಸ್. ಶಂಕರಪ್ಪ ಅವರನ್ನು ಸೋಮವಾರ ಬಂಧಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಾಣಿಜ್ಯ ಪ್ರಚಾರ ಶಾಖೆಯ ಉಪನಿರ್ದೇಶಕರಾಗಿದ್ದ ಎಸ್. ಶಂಕರಪ್ಪ, ಡಿಡಿಯೂಟಿಟಿಎಲ್ ನಲ್ಲಿ ಎಂ ಡಿ ಅಗಿ ಕೆಲಸ ಮಾಡಿದ್ದರು. ಇವರ ಅಧಿಕಾರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಬಗೆಗಿನ ಪುರಾವೆಗಳು ಲಭ್ಯವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಸಿಐಡಿ ಅಧಿಕಾರಿಗಳು, ಅವರನ್ನು ಬಂಧಿಸಿದ್ದಾರೆ.
ಡಿಡಿಯೂಟಿಟಿಎಲ್ 2021 ರಿಂದ 2023ರ ಅವಧಿಯಲ್ಲಿ ಅಕ್ರಮ ಎನ್ನಲಾದ ಅಕ್ರಮ ಬಗ್ಗೆ ಹಾಲಿ ಎಂಡಿ ಸಿ ಎನ್ ಶಿವಪ್ರಕಾಶ್ ಅವರು, ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ 2023 ಸೆಪ್ಟೆಂಬರ್ 23ರಂದು ಎಫ್ ಐ ಆರ್ ದಾಖಲಾಗಿದ್ದು, ಈ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.
‘ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 2021ರ ಅಕ್ಟೋಬರ್ 25ರಂದು 194ನೇ ನಿರ್ದೇಶಕ ಮಂಡಳಿ ಸಭೆ ನಡೆಸಲಾಗಿತ್ತು. ಎಂ.ಡಿ ಶಂಕರಪ್ಪ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಟ್ರಕ್ ಟರ್ಮಿನಲ್‌ಗಳ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ತುರ್ತಾಗಿ ತುಂಡು ಗುತ್ತಿಗೆ ನೀಡುವ ಬಗ್ಗೆ ಚರ್ಚಿಸಲಾಗಿತ್ತು. ₹ 10 ಕೋಟಿವರೆಗೆ ತುಂಡು ಗುತ್ತಿಗೆ ನೀಡಲು ಅಕ್ರಮವಾಗಿ ಅನುಮೋದನಾ ನಿರ್ಣಯ ಮಾಡಲಾಗಿತ್ತು. ಕಾಮಗಾರಿ ನಡೆಯದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆಯಲಾಗಿತ್ತು’ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಡಿಯೂಟಿಟಿಎಲ್ ಕಚೇರಿ ಹಾಗೂ ಹಲವಾರು ಮನೆಗಳ ಮೇಲೆ ದಾಳಿನಡೆಸಿದ ಅಧಿಕಾರಿಗಳು, 600ಕ್ಕೂ ಹೆಚ್ಚು ದಾಖಲೆಗಳು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.