25 ವರ್ಷಗಳ ಹಿಂದೆ ಕೋಮುಶಕ್ತಿಗಳ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡರು ಕಳೆದುಹೋಗಿದ್ದಾರೆ: ಕಾಂಗ್ರೆಸ್
ಬೆಂಗಳೂರು: ‘ದೇವೇಗೌಡರು ಕಳೆದುಹೋಗಿದ್ದಾರೆ, ಹುಡುಕಿಕೊಡಿ. 25 ವರ್ಷಗಳ ಹಿಂದೆ ಕೋಮುಶಕ್ತಿಗಳ ವಿರುದ್ಧ ತೊಡೆ ತಟ್ಟಿದ್ದ ಅಂದಿನ ದೇವೇಗೌಡರು ಈಗ ಕಳೆದುಹೋಗಿದ್ದಾರೆ..!’ ಎಂದು ಕಾಂಗ್ರೆಸ್ ಲೇವಡಿ ಮಾಡುವ ಮೂಲಕ, ಜೆಡಿಎಸ್-ಬಿಜೆಪಿ ಜತೆ ಮೈತ್ರಿಗೆ ಆಕ್ಷೇಪಿಸಿದೆ.
ಸೋಮವಾರ ʼಎಕ್ಸ್ʼ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಆರೆಸೆಸ್ಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ವಿಧ್ವಂಸಕ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದು ದೇವೇಗೌಡರಿಗೆ ನೆನಪಿದೆಯೇ? ಈಗ ಅದೇ ವಿಚಿದ್ರಕಾರಿ ಸಂಘಟನೆಗಳೊಂದಿಗೆ ಕೈಜೋಡಿಸಿದ್ದು ದೇವೇಗೌಡರ ದುರಂತವೋ, ಅವರನ್ನು ಸೆಕ್ಯುಲರ್ ಎಂದು ನಂಬಿದ್ದವರ ದುರಂತವೋ ತಿಳಿಯದು!’ ಎಂದು ಟೀಕಿಸಿದೆ.
‘ಕುಮಾರಸ್ವಾಮಿಯವರು ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಸಂಘ ಪರಿವಾರದ ಟ್ರೈನಿಂಗ್ ಕ್ಯಾಂಪ್ಗೆ ಕಳಿಸುತ್ತಿದ್ದಾರಂತೆ, ಹಿರಿಯ ಮುತ್ಸದ್ದಿ ನಾಯಕರಾದ ಸನ್ಮಾನ್ಯ ದೇವೇಗೌಡರು ಕಾಂಗ್ರೆಸ್ ಪಕ್ಷದ ನಾಶದ ಬಗ್ಗೆ ಮಾತಾಡುವ ಮೊದಲು ತಮ್ಮ ಪಕ್ಷ ನಾಶವಾಗುತ್ತಿರುವ ಬಗ್ಗೆ ಗಮನಿಸಿದರೆ ಒಳಿತು. ತಾವಷ್ಟೇ ಅಲ್ಲ, ತಮ್ಮ ಪಕ್ಷದ ಕಾರ್ಯಕರ್ತರನ್ನೂ ಬಿಜೆಪಿಗೆ ಅಡ ಇಡಲು ಹೊರಟಿರುವ ಕುಮಾರಸ್ವಾಮಿಯವರಿಂದ ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳುವ ದಾರಿ ಹುಡುಕಿಕೊಳ್ಳಲಿ’ ಎಂದು ಕಾಂಗ್ರೆಸ್ ಸಲಹೆ ನೀಡಿದೆ.
‘ಶ್ರೀರಾಮಚಂದ್ರ ಯಾರೊಬ್ಬರ ಸ್ವತ್ತೂ ಅಲ್ಲ. ಆದರೆ ರಾಮನ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿಯವರು ಶ್ರೀರಾಮ ತಮ್ಮೊಬ್ಬರ ಸ್ವತ್ತು ಎಂಬ ಭ್ರಮೆಯಲ್ಲಿದ್ದಾರೆ. ಈ ಬಗ್ಗೆ ನಮ್ಮ ಅನುಕಂಪವಿದೆ. ಬಿಜೆಪಿಯವರು ರಾಮಭಕ್ತರ ವೇಷದಲ್ಲಿರುವ ಸಮಾಜ ಕಂಟಕರು. ಜನವಿರೋಧಿ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ರಾಮವಿರೋಧಿ ಎಂದು ಬಿಂಬಿಸುವ ದುಷ್ಟ ಯತ್ನದಲ್ಲಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.
‘ಜ.22ರಂದು ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಅದೇಶಿಸಿರುವುದು ಬಿಜೆಪಿಗೆ ಸಂತಸ ತರುವ ಬದಲು ಸಂಕಟ ತಂದಿರುವುದು ಅವರ ಧರ್ಮವಿಕೃತಿಗೆ ಸಾಕ್ಷಿ. ಅವರಿಗೆ ಭಕ್ತಿ, ಪೂಜೆ, ಪುನಸ್ಕಾರ, ಸಂಸ್ಕಾರ ಬೇಕಿಲ್ಲ. ಅವರಿಗೆ ಬೇಕಿರುವುದು ಅದರ ಹೆಸರಿನಲ್ಲಿ ರಾಜಕೀಯ. ಅವರದು ಧರ್ಮದ ದಾರಿ ತಪ್ಪಿಸುವ ಹುನ್ನಾರ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.