ʼಮೋದಿ ಕುರಿತು ಸರ್ವಾಧಿಕಾರಿ ಹೇಳಿಕೆʼ ; ಖರ್ಗೆಯವರ ಕನಸಿನಲ್ಲಿ ಅಂಬೇಡ್ಕರ್ ಬಂದು ಹೇಳಿರಬೇಕು: ಕುಮಾರಸ್ವಾಮಿ
ಬೆಂಗಳೂರು: ‘ಮೋದಿ ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರಿ ಆಡಳಿತ ಬರುತ್ತದೆ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬಹುಶಃ ಕನಸಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಂದು ಹೇಳಿರಬೇಕು’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಶೇಷಾದ್ರಿಪುರಂನ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿ ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರಿ ಆಡಳಿತ ಬರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಹತಾಶೆಯನ್ನು ಸೂಚಿಸುತ್ತದೆ. ಬಹುಶಃ ಖರ್ಗೆ ಅವರಿಗೆ ಕನಸಿನಲ್ಲಿ ಅಂಬೇಡ್ಕರ್ ಬಂದು ಹೇಳಿರಬೇಕು ಎಂದರು.
ಅಯೋಧ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ಇವರು ಗ್ಯಾರಂಟಿಗಳ ವಿಷಯದಲ್ಲಿ ಮಾಡಿದ್ದೇನು? ರಾಜಕೀಯವನ್ನೆ ಮಾಡಿದರು, ಅಲ್ಲವೇ? ಎಂದು ಪ್ರಶ್ನಿಸಿದರು.
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ರಾಮಮಂದಿರ ಕಟ್ಟಿದ್ದು ಜನರ ದೇಣಿಗೆಯ ಹಣದಿಂದ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದು ಜನರ ತೆರಿಗೆ ಹಣದಿಂದ. ಆದರೂ, ಅವುಗಳನ್ನು ಜಾರಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆಸಿ ಕಾರ್ಯಕ್ರಮ ಮಾಡಬಹುದಾ? ಅವರಿಗೂ ರಾಜ್ಯಕ್ಕೂ ಏನು ಸಂಬಂಧ? ಗ್ಯಾರಂಟಿಗಳ ಹಣ ಕಾಂಗ್ರೆಸ್ ಪಕ್ಷದ ಖಜಾನೆಯದ್ದಾ? ಎಂದು ಪ್ರಶ್ನೆ ಮಾಡಿದರು.
ಧೈರ್ಯವಿದ್ದರೆ ಕಾಂತರಾಜು ವರದಿ ಸ್ವೀಕರಿಸಿ
ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಈ ವರದಿಯನ್ನು ಸ್ವೀಕಾರ ಮಾಡಲಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ಯಾಕೆ ಆ ವರದಿಯನ್ನು ಸ್ವೀಕಾರ ಮಾಡಿ ಜಾರಿ ಮಾಡಲಿಲ್ಲ. ಧೈರ್ಯವಿದ್ದರೆ ಕಾಂತರಾಜು ವರದಿಯನ್ನು ಸ್ವೀಕಾರ ಮಾಡಿ ಎಂದು ಸವಾಲು ಹಾಕಿದರು.
ಒಬ್ಬ ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆದ. ಇದಕ್ಕಾಗಿಯೇ ನನ್ನ ಮೇಲೆ ವಿಷ ಕಾರುತ್ತಾರೆಂದು ಅಳಲು ತೋಡಿಕೊಂಡಿದ್ದಾರೆ. ಕುರಿ ಕಾಯುವ ಮಗನನ್ನೆ ಅಂದು ದೇವೇಗೌಡರು ಆರ್ಥಿಕ ಸಚಿವರನ್ನಾಗಿ ಮಾಡಿದ್ದರು. ನಿಮ್ಮ ಇಷ್ಟು ವರ್ಷದ ರಾಜಕೀಯದಲ್ಲಿ ಎಷ್ಟು ಬಾರಿ ಸಚಿವ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದೀರಿ. ಜಾತಿವ್ಯವಸ್ಥೆ, ಶೋಷಣೆ ಅಂತ್ಯ ಮಾಡಲು ಅವಕಾಶ ಇತ್ತು ನಿವು ಯಾಕೆ ಮಾಡಲಿಲ್ಲ? ಎಂದು ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.